ಬಂಟ್ವಾಳ:  ಸಂವಿಧಾನ ಇಲ್ಲದೇ ಕಾನೂನು ಪಾಲನೆ ಅಸಾಧ್ಯವಾಗಿದ್ದು, ದೇಶದ ಭ್ರಾತೃತ್ವ, ಸಹೋದರತೆ ಹಾಗೂ ಸಮಾನತೆಗಾಗಿ ಸಂವಿಧಾನವನ್ನು ಉಳಿಸುವ ಕಾರ್ಯಾವಾಗಬೇಕಾಗಿದೆ ಎಂದು ಮಂಗಳೂರು ಕೆಪಿಟಿ ಕಾಲೇಜಿನ ಹಿರಿಯ ಶ್ರೇಣಿಯ ಉಪನ್ಯಾಸಕ ಭಾಸ್ಕರ ವಿಟ್ಲ ಹೇಳಿದ್ದಾರೆ.

ಅವರು ಮಂಗಳವಾರ ಪಾಣೆಮಂಗಳೂರು ಶ್ರೀಶಾರದಾ ಪ್ರೌಢಶಾಲೆಯಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿ, ಕಾನೂನು ಪಾಲನೆ ಆಗದೇ ಇದ್ದಲ್ಲಿ ಹಕ್ಕುಗಳ ರಕ್ಷಣೆ ಅಸಾಧ್ಯ. ಹಕ್ಕುಗಳಿಗೆ ತೊಡಕುಂಟಾದಾಗ ನಾವು ಸವಲತ್ತುಗಳನ್ನು ಕಳೆದುಕೊಂಡು ದುರ್ಬಲರಾಗುತ್ತೇವೆ ಎಂದರು.

ಪ್ರಸ್ತುತ ದಿನಗಳಲ್ಲಿ ಸಂವಿಧಾನವನ್ನು ಉಳಿಸುವ ನಮ್ಮೆಲ್ಲರ ಜಬಾಬ್ದಾರಿಯಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಗಳು ಸಂವಿಧಾನದ ಪ್ರತಿಯನ್ನು ಖರೀದಿಸಿ ದಿನಕ್ಕೆ ಒಂದು ಪುಟವಾದರೂ ಓದುವುದರ ಜೊತೆಗೆ ನಿರಂತರ ಅಭ್ಯಾಸ ಮಾಡುವ ಮೂಲಕ ಜೀವನದಲ್ಲಿ ಅಳವಡಿಸಿಕೊಂಡು ನಮ್ಮ ಹಕ್ಕುಗಳನ್ನು ರಕ್ಷಣೆ ಮಾಬೇಕಾಗಿದೆ ಎಂದು ಅವರು ಹೇಳಿದರು.

ದೇಶದ ಸಂವಿಧಾನವು ರೂಪುಗೊಳ್ಳುವುದರ ಹಿಂದೆ ಸಂಘರ್ಷ ನಡೆದಿದ್ದು, ಈಗಲೂ ಸಂಘರ್ಷಗಳು ನಡೆಯುತಿವೆ ಎಂದ ಅವರು, ಪ್ರತಿಯೊಂದು ವಿಚಾರಕ್ಕೂ ಹಕ್ಕಗಳನ್ನು ನೀಡಿರುವ ಏಕೈಕ, ಅದ್ಭುತ ಸಂವಿಧಾನ ನಮ್ಮದಾಗಿದೆ. ಮಹಿಳೆಯರಿಗೆ ಸಮಾನ ಅವಕಾಶದೊಂದಿಗೆ ಘನತೆಯಿಂದ ಬದುಕುವ ಹಕ್ಕನ್ನು ನೀಡಿದೆ. ಪ್ರತಿಯೊಬ್ಬ ವ್ಯಕ್ತಿಯು ಭ್ರಾತೃತ್ವವನ್ನು ಮೈಗೂಡಿಸಿಕೊಳ್ಳಬೇಕಾಗಿದೆ ಎಂದು ಅವರು ಸಲಹೆ ನೀಡಿದರು.

ಉಪನ್ಯಾಸಕ ಧನರಾಜ್ ದೊಡ್ಡನೇರಳೆ ಪ್ರಸ್ತಾವಿಸಿ ಮಾತನಾಡಿ, ನಮ್ಮ ಜೀವನದ ಭಾಗವಾಗಿರುವ ಸಂವಿಧಾನ ಗಂಡಾಂತರದಲ್ಲಿದ್ದು, ಈ ಅಪಾಯವನ್ನು ಧೈರ್ಯದಿಂದ ಎದುರಿಸುವ ಕೆಲಸವಾಗಬೇಕಾಗಿದೆ. ಇದಕ್ಕಾಗಿ ಸಂವಿಧಾನದ ಮರು ಓದು ಅಗತ್ಯ ಎಂದರು.

ಶಾಲಾ ಸಂಚಾಲಕ ವೇದಮೂರ್ತಿ ಎನ್. ಜನಾರ್ಧನ ಭಟ್ ಅವರು ಸಂವಿಧಾನ ದಿನದ ಮಹತ್ವದ ಬಗ್ಗೆ ಮಾತನಾಡಿದರು. ಶಾಲಾ ಹಿರಿಯ ಶಿಕ್ಷಕಿ ಸುಧಾ ನಾಗೇಶ್ ಅವರು ಸಂವಿಧಾನ ರಕ್ಷಣಾ ವಿಧಿ ಪ್ರತಿಜ್ಞಾ ಸ್ವೀಕಾರ ಬೋಧಿಸಿದರು. ಶಾಲಾ ನಾಯಕಿ ದಿಶಾ ಸಂವಿಧಾನದ ಪೀಠಿಕೆಯನ್ನು ವಾಚಿಸಿದರು. ಶಿಕ್ಷಕಿ ಪ್ರಜ್ಞಾ ಸಂವಿಧಾನ ಕುರಿತು ನಡೆಸಿದ ಸ್ಪರ್ಧೆಯಲ್ಲಿ ಪ್ರಶಸ್ತಿ ವಿಜೇತರಾದ ಮಕ್ಕಳ ಪಟ್ಟಿಯನ್ನು ಓದಿದರು.

ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣ ಸಂಯೋಜಕಿ ಸುಶೀಲಾ ಹಾಜರಿದ್ದರು.

ಕನ್ನಡ ಅಧ್ಯಾಪಕ ಧನರಾಜ್ ಸ್ವಾಗತಿಸಿ, ಶಾಲಾ ಮುಖ್ಯ ಶಿಕ್ಷಕ ಭೋಜ ಸರ್ ವಂದಿಸಿದರು. ಅಧ್ಯಾಪಕ ಸುಧಾಕರ್ ಕಾರ್ಯಕ್ರಮ ನಿರೂಪಿಸಿದರು.