01
ನಾವು ಒಂದಾದಾಗ
ಹೆಸರಿಟ್ಟರು
ವಿವಾಹ.
ನಮಗೊಂದು ಹುಟ್ಟಿದಾಗ
ನಮ್ಮದಾಯಿತು
ಕುಟುಂಬ.
ಮೊಮ್ಮಕ್ಕಳು ಬಂದಾಗ
ಕರೆದರು
ಪರಿವಾರ.ವಯಸ್ಸಾಗಿ ಸತ್ತಾಗನಮ್ಮದಾಯಿತು
ಹೆಣ.

 02
ಬಿಸಿಯೋ, ಕಹಿಯೋ
ನಂಜೋ....
ಒಳಗೇನಿದೆ?
ಉಗುಳಿ ಬಿಟ್ಟರೆ
ಒಮ್ಮೆ ಸಿಗಬಹುದೇನೋ,
ಸಹಜ
ರಹದಾರಿ ಬೇಕಿದ್ದ ಕಡೆಗೆ....
ಹದ ತಪ್ಪಿ ಬೆಂದರೂ
ಮತ್ತೆ ಬೆದಕಿ
ನೋಡುವ ಬಯಕೆ
ಯಾವ ಪುರುಷಾರ್ಥಕೆ....?        

03
ಪದ ಪದಗಳ ಹಿಂಜಿ
ಪದಾರ್ಥವ ಬೆದಕಿ
ಸಿಗದ ಭಾವವ
ವ್ಯರ್ಥ ಹುಡುಕುತಿದೆ ಜಗ!
ವ್ಯಕ್ತ ಮಧ್ಯದಿ ಬಿಂದು
ಸಿಂಧುವನು ಕೂಡಿ
ಮತ್ತೆ ರೂಹು ಪಡೆವುದು
ಒಂದು ಸೋಜಿಗ!!

04
ಉರಿವ ಕುಲುಮೆ
ಕುದಿವ ರಸಪಾಕ
ಎರಕ ಹೊಯ್ದು
ಬೇಕಾದ ಆಕಾರ
ಕೊಡಬಲ್ಲೆ, ನೀನು ಗೊತ್ತು....

ಏನೇನೋ ಆಗದ ನೋವಿಗಿಂತ
ಏನಾದರೂ
ಆಗಿಯೇ  ತೀರುವ
ರೂಪಾಂತರದ ನೋವು
ಸಹನೀಯ!!



-ಉರ್ಬನ್ ಡಿಸೋಜ