ಕಿನ್ನಿಗೋಳಿ:-  ಯುಗಪುರುಷ ಸಂಸ್ಥಾಪಕ ದಿ| ಕೊ.ಅ.ಉಡುಪರ ಸಂಸ್ಮರಣಾರ್ಥ ಪ್ರತೀ ವರ್ಷ ಗೌರವಪೂರ್ವಕವಾಗಿ ನೀಡಲಾಗುವ ಕೊ.ಅ. ಉಡುಪ ಪ್ರಶಸ್ತಿಯನ್ನು ಈ ಬಾರಿ ಕಾವ್ಯ, ಕಥೆ, ಅನುವಾದ, ಸಂಶೋಧನೆ, ವಿಮರ್ಶೆ, ನಿಘಂಟುರಚನೆ, ಗ್ರಂಥಸಂಪಾದನೆ, ಗೀತರೂಪಕ ಮುಂತಾದ ಸಾಹಿತ್ಯದ ವಿವಿಧಪ್ರಕಾರಗಳಲ್ಲಿ ಕೃಷಿಮಾಡಿದ ಡಾ.ಕಬ್ಬಿನಾಲೆ ವಸಂತ ಭಾರದ್ವಾಜರವರಿಗೆ ನೀಡಲಾಗುವುದು.

ಯಕ್ಷಗಾನ ಕವಿಚರಿತ್ರೆ, ಶಬ್ದಶಾರದೆಯ ಸೆರಗು, ಹೊಸ ಬ್ಯಾಂಕಿಂಗ್ ನಿಘಂಟು, ರಾಮನ ಹುಡುಕಾಟ, ಕನಕ ಮುಂಡಿಗೆ, ಕನಕದಾಸರ ಕಾವ್ಯಭಾಷೆ, ಕುವೆಂಪು ಮತ್ತು ಅಧ್ಯಾತ್ಮ, ತಾವರೆಯ ತೇರು, ಛಂದೋವಸಂತ, ಸರಳ ವಡ್ಡಾರಾಧನೆ, ಕನ್ನಡ ಭಾಷೆಯ ರಚನೆ, ಯಕ್ಷಗಾನ ಪ್ರಸಂಗಗಳು, ಮುಕ್ತಕ ಮನೋರಮೆ ಮುಂತಾದ ನೂರಕ್ಕೂ ಹೆಚ್ಚು ಮೌಲಿಕಕೃತಿಗಳನ್ನು ರಚಿಸಿದವರು. ಶ್ರೀರಾಮಲೀಲಾದರ್ಶನಂ, ಕನಕತರಂಗಿಣಿ ಮತ್ತು ಶ್ರೀಲ ಪ್ರಭುಪಾದ ಚರಿತಾಮೃತಂ ಎಂಬ ಮೂರು ಮಹಾಕಾವ್ಯಗಳನ್ನು ಕನ್ನಡ ವಾಙ್ಮಯಕ್ಕೆ ನೀಡಿದ ಮಹಾಕವಿಗಳು ಇವರು. ಇವರ ಬರಹಗಳು ಯುಗಪುರುಷ ಪತ್ರಿಕೆಯಲ್ಲಿ ಪ್ರಕಟಗೊಳ್ಳುತ್ತಾ ಬಂದಿವೆ.

ಮುಂಬಯಿಯಲ್ಲಿ ನಡೆದ ಅಖಿಲಭಾರತ ಯಕ್ಷಗಾನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ವಿಜಯಪುರದಲ್ಲಿ ನಡೆದ ಅಖಿಲ ಕರ್ನಾಟಕ ಗಮಕಕಲಾ ಸಮ್ಮೇಳನದ ಅಧ್ಯಕ್ಷತೆ, ಕಾರ್ಕಳತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಕರ್ನಾಟಕ ಸರಕಾರದ ಕನಕ ಅಧ್ಯಯನ ಕೇಂದ್ರದ ಕನಕಗೌರವ ಪುರಸ್ಕಾರ, ಕರ್ನಾಟಕ ತುಳುಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, ಆರ್ಯಭಟ, ಕರಾವಳಿ ರತ್ನ, ತೌಳವಶ್ರೀ, ವಿಶ್ವಮಾನವ ಪ್ರಶಸ್ತಿ, ಚಿಟ್ಟಾಣಿಪ್ರಶಸ್ತಿ, ಸಂಸ್ಕೃತಿ ಸಂಗಮ ಪ್ರಶಸ್ತಿ, ಮಂಗಳೂರು ವಿ.ವಿ.ಯಿಂದ ಯಕ್ಷಮಂಗಳಾ ಪ್ರಶಸ್ತಿಗಳೇ ಮೊದಲಾದ ಹತ್ತುಹಲವು ಪ್ರತಿಷ್ಠಿತ ಗೌರವಗಳಿಗೆ ಪಾತ್ರರಾಗಿದ್ದಾರೆ. ಯಕ್ಷಗಾನ ಸಾಹಿತ್ಯಚರಿತ್ರೆ ಯೋಜನೆಗಾಗಿ ಕೇಂದ್ರಸರಕಾರದ ಸಂಸ್ಕೃತಿ ಸಚಿವಾಲಯದ ಸೀನಿಯರ್ ಫೆಲೋಷಿಪ್ ಗೌರವವನ್ನೂ ಪಡೆದಿದ್ದಾರೆ.

ಕೊ.ಅ.ಉಡುಪ ಪ್ರಶಸ್ತಿಯನ್ನು ಇದೇ ಜುಲೈ 24ರಂದು ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಜರಗಲಿರುವ ಸರಳ ಸಮಾರಂಭದಲ್ಲಿ ರೂ. 10,000/- ನಗದು, ಗೌರವ ಫಲಕ, ಪ್ರಶಸ್ತಿ ಪತ್ರದೊಂದಿಗೆ ಪ್ರದಾನ ಮಾಡಲಾಗುವುದು ಎಂದು ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪರು ತಿಳಿಸಿದ್ದಾರೆ.  

ಶ್ರೀರಾಮಲೀಲಾದರ್ಶನಂ, ಕನಕತರಂಗಿಣಿ ಮತ್ತು ಶ್ರೀಲ ಪ್ರಭುಪಾದ ಚರಿತಾಮೃತಂ ಎಂಬ ಮೂರು ಮಹಾಕಾವ್ಯಗಳನ್ನು ಕನ್ನಡ ವಾಙ್ಮಯಕ್ಕೆ ನೀಡಿದ ಮಹಾಕವಿಗಳು.