ಬೆಂಗಳೂರು: "ಲಾಕ್ ಡೌನ್ ಮಾಡಿದರೆ ಕೊರೋನಾ ನಿಯಂತ್ರಣಕ್ಕೆ ಬರುತ್ತದೆ ಎಂದು ನನಗಂತೂ ಅನಿಸುತ್ತಿಲ್ಲ. ಆದರೂ ಲಾಕ್ ಡೌನ್ ಒಂದೇ ಪರಿಹಾರ ಅಂತ ಅನಿಸಿದರೆ ಆಯಾ ಜಿಲ್ಲಾಧಿಕಾರಿಗಳು ಈ ಕುರಿತು ನಿರ್ಧಾರ ತೆಗೆದುಕೊಳ್ಳಬಹುದು" ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಉಡುಪಿ, ದಕ್ಷಿಣ ಕನ್ನಡ, ಕಲ್ಬುರ್ಗಿ ಸೇರಿದಂತೆ ಹನ್ನೊಂದು ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಕೋವಿಡ್ ನಿಯಂತ್ರಣ ಕುರಿತು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಯಡಿಯೂರಪ್ಪ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ಬೆಂಗಳೂರಿನಲ್ಲಿ ಜುಲೈ 14 ರಿಂದ ಕಡ್ಡಾಯವಾಗಿ ಲಾಕ್ ಡೌನ್ ಜಾರಿಯಾಗಲಿದ್ದು ಬೆಂಗಳೂರು ನಗರ ಮತ್ತು ಗ್ರಾಮಾಂತರಗಳಲ್ಲಿ ಹಿಂದಿಗಿಂತ ಹೆಚ್ಚು ಕಠಿನ ನಿಯಮಗಳು ಜಾರಿಗೆ ಬರಲಿವೆ. ಆದರೆ ಉಳಿದ ಜಿಲ್ಲೆಗಳಲ್ಲಿ ಇದೇ ರೀತಿಯ ಲಾಕ್ ಡೌನ್ ಅಗತ್ಯವಿದೆಯೆ ಎಂಬ ಚರ್ಚೆಯ ಹಿನ್ನೆಲೆಯಲ್ಲಿ ಇಂದಿನ ಸಭೆ ಮಹತ್ವ ಪಡೆದಿದೆ.

ರಾಜ್ಯದಾದ್ಯಂತ ಎಲ್ಲ ಜಿಲ್ಲೆಗಳಲ್ಲೂ ಲಾಕ್ ಡೌನ್ ಮಾಡಿ ಎಂದು ಮಾಜಿ ಪ್ರಧಾನಿ ದೇವೆಗೌಡ ಸೇರಿದಂತೆ ಹಲವರು ಸಲಹೆ ನೀಡಿದ್ದಾರೆ. ಜೊತೆಗೆ ಬೆಂಗಳೂರಿನಿಂದ ಬೇರೆ ಊರಿಗೆ ತೆರಳಿದವರು ಅಲ್ಲಿ ಹೋಮ್ ಕ್ವಾರಂಟೈನ್‌ನಲ್ಲಿ ಇರಬೇಕು ಎಂದೂ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗಿದೆ.