ಹೊಸದಿಲ್ಲಿ: ದೇಶದ ಮೊದಲ ಕೋವಿಡ್ ವೈರಸ್‌ ಲಸಿಕೆ ಅಭಿವೃದ್ಧಿ ಪ್ರಕ್ರಿಯೆ ವೇಗ ಪಡೆದಿದ್ದು, ಸದ್ಯದಲ್ಲೇ ಮಾನವನ ಮೇಲೆ ಕೊವ್ಯಾಕ್ಸಿನ್‌ ಲಸಿಕೆಯ ಪ್ರಯೋಗ ಆರಂಭವಾಗಲಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್‌), ಖಾಸಗಿ ಫಾರ್ಮಾ ಕಂಪೆನಿಯಾದ ಭಾರತ್‌ ಬಯೋಟೆಕ್‌ ಇಂಡಿಯಾ ಲಿಮಿಟೆಡ್‌ ಮತ್ತು ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್ ವೈರಾಲಜಿ (ಎನ್‌ಐವಿ) ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಲಸಿಕೆಯನ್ನು ಎರಡು ಹಂತಗಳಲ್ಲಿ ಸಾವಿರಕ್ಕೂ ಅಧಿಕ ಮಂದಿಯ ಮೇಲೆ ಪ್ರಯೋಗಿಸಲಾಗುತ್ತದೆ. ಮೊದಲ ಹಂತದಲ್ಲಿ 375 ಮಂದಿಯ ಮೇಲೆ ಮತ್ತು 2ನೇ ಹಂತದಲ್ಲಿ 750 ಮಂದಿಯ ಮೇಲೆ ಲಸಿಕೆಯ ಪ್ರಯೋಗ ನಡೆಯಲಿದೆ. ಈಗಾಗಲೇ ಭಾರತೀಯ ಔಷಧ ನಿಯಂತ್ರಣ ನಿರ್ದೇಶನಾಲಯ(ಡಿಜಿಸಿಐ)ವು ಮೊದಲ 2 ಹಂತದ ಪ್ರಯೋಗಕ್ಕೆ ಅನುಮತಿ ನೀಡಿದೆ. ಕರ್ನಾಟಕದ ಬೆಳಗಾವಿಯ ಜೀವನ್‌ರೇಖಾ ಆಸ್ಪತ್ರೆ ಸೇರಿದಂತೆ 12 ಸಂಸ್ಥೆಗಳಲ್ಲಿ ಕ್ಲಿನಿಕಲ್‌ ಟ್ರಯಲ್‌ ನಡೆಯಲಿದೆ.

3ನೇ ಹಂತಕ್ಕೆ 3 ಲಸಿಕೆಗಳು: ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿ ಪ್ರಕಾರ, ಜಗತ್ತಿನಾದ್ಯಂತ ಒಟ್ಟು 19 ಲಸಿಕೆಗಳ ಅಭಿವೃದ್ಧಿ ಪ್ರಕ್ರಿಯೆ ನಡೆಯುತ್ತಿದೆ. ಈ ಪೈಕಿ ಆಸ್ಟ್ರಾಝೆನೆಕಾ ಮತ್ತು ಸಿನೋವಾಕೇರ್‌ ಎಂಬ ಎರಡು ಲಸಿಕೆಗಳು ಮಾನವನ ಮೇಲಿನ ಪ್ರಯೋಗದ ಮೂರನೇ ಹಂತ ತಲುಪಿವೆ. ಈಗ ಚೀನದ ಸಿನೋವ್ಯಾಕ್‌ ಬಯೋಟೆಕ್‌ ಕಂಪನಿ ಕೂಡ ಈ ಸಾಧನೆ ಮಾಡಿದ್ದು, ತನ್ನ ಲಸಿಕೆಯನ್ನು ಕೊನೆಯ ಹಂತದ ಪ್ರಯೋಗಕ್ಕೆ ಒಳಪಡಿಸುವ ಪ್ರಕ್ರಿಯೆ ಆರಂಭಿಸಿದೆ. ಇನ್ನು, ಪಿಫಿಜರ್‌, ನೋವಾವ್ಯಾಕ್ಸ್‌, ಕ್ಯಾಡಿಲಾ ಹೆಲ್ತ್‌ಕೇರ್‌ ಸೇರಿದಂತೆ 6 ಸಂಸ್ಥೆಗಳು ಲಸಿಕೆಯ 2ನೇ ಹಂತದ ಪ್ರಯೋಗ ನಡೆಸುತ್ತಿವೆ.