ಇವತ್ತಿನ ಜೀವನದಲ್ಲಿ ಕನಸು ಕಾಣಲು ಹೆದರುತ್ತೇವೆ. ಕನಸು ಕಂಡರೆ ಆ ಕನಸು ನನಸಾಗುತ್ತಾ ಅನ್ನುವ ಪ್ರಶ್ನೆ ಮೂಡುತ್ತೆ. ನನ್ನ ಮೇಲೆ ನನಗೆ ನಂಬಿಕೆ ಇದೆ,ಭರವಸೆಯೂ ಇದೆ ಆದರೆ  ಕನಸುಗಳ ಬೆನ್ನತ್ತುವ ದೈಯ೯ವಿಲ್ಲ. ಯಾಕೆಂದರೆ ಈ ಕೊವಿಡ್‌- 19  ಎಂಬ ಪೆಡಂಭೂತ ನಮ್ಮ ಕನಸಿಗೆ ಇಲ್ಲದ ಬೇಲಿ, ಸರಹದ್ದು ಹಾಕಿದೆ.

ಕನಸುಗಳು ನಮ್ಮನ್ನು ಸಪ್ತಸಮುದ್ರದಾಚೆಗೆ ಕೊಂಡೊಯ್ಯುತ್ತವೆ. ನನ್ನಂತಹ ಎಷ್ಟೋ ಜನಸಾಮಾನ್ಯರು ಜನಪ್ರಿಯ ವ್ಯಕ್ತಿಯಾಗಬೇಕು, ವಿದೇಶ ಪ್ರವಾಸ ಮಾಡಬೇಕು, ಪ್ರಪಂಚ  ಹೇಗೆ ಎಂದು ತಿಳಿದುಕೊಳ್ಳಬೇಕು, ಅಪ್ಪ-ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು. ತಂಗಿ-ತಮ್ಮನ ಶಿಕ್ಷಣ ನಾನೇ ನೋಡಿಕೊಳ್ಳಬೇಕು ಎಂದು ಕನಸು ಕಾಣುವವರು ಕೊವಿಡ್‌ ನಂತರದ ದಿನಗಳಲ್ಲಿ ಜೀವನ ಹೀಗಾದರೆ ಹೇಗೆ ಎಂಬ ಚಿಂತೆಯಲ್ಲೇ ಬದುಕುತ್ತಿದ್ದಾರೆ. ಹಾಗಾದರೆ ನಮ್ಮ ಕನಸುಗಳ ಗತಿ?

ಒಮ್ಮೆ ಕೊವಿಡ್‌ನಿಂದ ನಮ್ಮನ್ನು ರಕ್ಷಣೆ ಮಾಡುವ, ಜೀವನದ ಕಷ್ಟಗಳನ್ನು ದೂರ ಮಾಡುವ ವೈದ್ಯರುಗಳು, ಆರಕ್ಷಕರು, ಮುನ್ಸಿಪಾಲಿಟಿಯವರು, ಆಶಾ ಕಾರ್ಯಕರ್ತೆಯರು ಇವರೆಲ್ಲರ ಬಗ್ಗೆ ಯೋಚಿಸೋಣ. ಅವರಿಗೂ ಕನಸುಗಳಿರುತ್ತವೆ. ಆದರೂ ಅವರು ತಮ್ಮ ಪ್ರಾಣವನ್ನು ಲೆಕ್ಕಿಸದೇ ಕೆಲಸ ನಿವ೯ಹಿಸುತ್ತಾರೆ. ಇಡೀ ಮನುಕುಲಕ್ಕೆ ಕಂಟಕವಾಗುತ್ತಿರುವ ಕೊರೋನಾ ವೈರಾಣು ವಿರುದ್ಧ ಹೋರಾಡಲು ತಮ್ಮ ಕತ೯ವ್ಯಗಳನ್ನು ಚಾಚುತಪ್ಪದೇ ಮಾಡುತ್ತಿದ್ದಾರೆ. ಇವರ ಜೊತೆಗೆ ನಾವು ಕೈಜೋಡಿಸೋಣ ಅಲ್ಲವೇ?

  ಕೊರೋನ ವೈರಾಣು ಸೃಷ್ಟಿಸಿರುವ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವು ನಮ್ಮ ಸ್ವಯಂ ನಿಯಂತ್ರಣ, ಸಾಮಾಜಿಕ ಕಾಳಜಿ, ವೈರಾಣು ಹರಡುವುದನ್ನು ತಡೆಯಲು ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸುವುದು, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಮತ್ತು ಮುಖ್ಯವಾಗಿ ಅನಗತ್ಯ ಪ್ರಯಾಣ ಮಾಡದೆ ಇರುವುದು ಸಮಾಜಕ್ಕೆ ನಾವು ಕೊಡಬಹುದಾದ ಒಂದು ದೊಡ್ಡ ಕೊಡುಗೆ. ಕೊರೋನಾ ಮಾಯವಾಗುತ್ತಿದೆ ಎಂಬ ಭ್ರಮೆ ಬೇಡ, ನಿರ್ಲಕ್ಷ್ಯ ಮಾಡಿ ಅಪಾಯವನ್ನು ನಮ್ಮ ಮೇಲೆ, ನಮ್ಮವರ ಮೇಲೆ ಎಳೆದುಕೊಳ್ಳುವುದು ಬೇಡ.

ನಾವು ಒಬ್ಬರು ತಪ್ಪು ಮಾಡಿದರೆ ನಮ್ಮಿಂದಾಗಿ ಎಷ್ಟೋ ಮಂದಿಗೆ ತೊಂದರೆಯಾಗುತ್ತದೆ, ಎಷ್ಟೋ ಜನರ ಕನಸುಗಳನ್ನು ದೂರಮಾಡುತ್ತಿದ್ದೇವೆ ಎಂಬ ಅರಿವು ನಮಗಿರಲಿ. ದೇಶದ ಮೇಲೆ ವೈರಿಗಳು ದಾಳಿ ಮಾಡಿದಾಗ  ಹೇಗೆ ಎಲ್ಲರೂ ಜಾತಿ ಮತಭೇದ ಮರೆತು ಒಟ್ಟಾಗಿ ನಿಲ್ಲುತ್ತೇವೋ ಅದೇ ರೀತಿ ಹಿಡಿತ ತಪ್ಪಿ ಮಾರಕವಾಗಿರುವ ಈ ವೈರಾಣುವನ್ನು ಮಣಿಸಲು ಏಕಚಿತ್ತರಾಗಿ ನಿಲ್ಲುವುದು ಈ ಕ್ಷಣದ ಅಗತ್ಯವಾಗಿದೆ. ಹಾಗಾಗಿ ನಾವೆಲ್ಲರೂ ಆರೋಗ್ಯದ ಬಗ್ಗೆ ಎಚ್ಚರ ವಹಿಸೋಣ.  ನಮ್ಮ ಕನಸುಗಳನ್ನು ನನಸಾಗಿಸಲು ಸಾಧ್ಯವಾದಷ್ಟು ಪ್ರಯತ್ನಪಡೋಣ.


By ನವ್ಯ ಎನ್.

ದ್ವಿತೀಯ ಬಿಎ, ಪತ್ರಿಕೋದ್ಯಮ

ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು