ಗೋವಾ: ಗೋವೆಯ ಖ್ಯಾತ ಕೊಂಕಣಿ ಸಾಹಿತ್ಯಕಾರ, ಅನುವಾದಕ, ಭೌದ್ಧ, ಕ್ರೈಸ್ತ ಹಾಗೂ ಭಾರತೀಯ ಭಾಷೆಗಳ ಸಾಹಿತ್ಯಗಳನ್ನು ಅಧ್ಯಯನ ಮಾಡಿ ಕೊಂಕಣಿ ಭಾಷೆಗೆ ಅನುವಾದ ಮಾಡಿ ಹೆಸರು ಪಡೆದ ಪದ್ಮಶ್ರೀ ಡಾ. ಸುರೇಶ ಗುಂಡು ಅಮೋಣಕರ ತಾ.08-12-2019 ರಂದು ತಮ್ಮ 86 ನೇ ವಯಸ್ಸಿನಲ್ಲಿ ಗೋವೆಯ ತಮ್ಮ ಸ್ವಗೃಹದಲ್ಲಿ ನಿಧನರಾದರು. ಎಂ. ಎ. ಪದವೀಧರ ಅಮೋಣಕರ ಜೈನ ಕಥಾ ಸಂಗ್ರಹವನ್ನು, ಜಾತಕ ಕಥೆಗಳನ್ನು, ಭೌದ್ಧ ‘ಧಮ್ಮಪದ’, ‘ಶ್ರೀ ಭಗವಂತಾನ ಗಾಯಿಲೆ ಗೀತ’, ‘ಶ್ರೀಮದ್ ಭಾಗವತ ತಮಿಳು ತಿರುವಳ್ಕುವರ ಕವಿಯ ತಿರುಕ್ಕುರಳ ಹಾಗೂ ಮರಾಠಿಯಿಂದ ‘ಜ್ಞಾನೇಶ್ವರಿ’ ಮತ್ತು ‘ಭಗವದ್ಗೀತೆ’ಗಳನ್ನು ಕೊಂಕಣಿ ಭಾಷೆಗೆ ಭಾಷಾಂತರಿಸಿದ್ದರು. 1999 ರಲ್ಲಿ ಇವರ “ಧಮ್ಮಪದ” ಕೊಂಕಣಿ ಭಾಷಾಂತರ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರವನ್ನಿತ್ತಿದೆ.
ಆಫ್ರಿಕಾದ ಕಿನ್ಯಾದಲ್ಲಿ ಶಿಕ್ಷಕರಾಗಿದ್ದ ಅಮೋಣಕರ ಬಳಿಕ ಗೋವೆಯಲ್ಲಿ ಪ್ರಾಧ್ಯಾಪಕರಾಗಿದ್ದು ಶೈಕ್ಷಣಿಕ ವಲಯದಲ್ಲಿ ಅಪಾರ ಸೇವೆ ಗೈದ ಅವರಿಗೆ ರಾಜ್ಯ ಸರಕಾರ ಸನ್ಮಾನಿಸಿತ್ತು. ಭಾರತ ಸರಕಾರದಿಂದ ಸುರೇಶ ಅಮೋಣಕರ ಇವರಿಗೆ ವಿದ್ಯಾ ಕ್ಷೇತ್ರಕ್ಕೆ ಇತ್ತ ಕೊಡುಗೆಯನ್ನು ಪರಿಗಣಿಸಿ 2009 ರಲ್ಲಿ “ಪದ್ಮಶ್ರೀ” ಪದವಿಯನ್ನಿತ್ತು ಸನ್ಮಾನಿಸಿದೆ. ಅಲ್ಲದೇ 2015 ರಲ್ಲಿ ವಿಶ್ವ ಕೊಂಕಣಿ ಕೇಂದ್ರದಿಂದ ನೀಡಲಾಗುವ ಶ್ರೀಮತಿ ವಿಮಲಾ ವಿ. ಪೈ ವಿಶ್ವ ಕೊಂಕಣಿ ಜೀವನ ಸಿದ್ಧಿ ಸಾಹಿತ್ಯ ಪ್ರಶಸ್ತಿಯನ್ನಿತ್ತು ಸನ್ಮಾನಿಸಲಾಗಿತ್ತು.
ಗೋವೆ ಸರಕಾರ 2018 ರಲ್ಲಿ ಗೋವಾ ಕೊಂಕಣಿ ಅಕಾಡೆಮಿಯ ಅಧ್ಯಕ್ಷರನ್ನಾಗಿ ನೇಮಿಸಿದೆ. ಪದ್ಮಶ್ರೀ ಸುರೇಶ ಅಮೋಣಕರ ಇವರ ನಿಧನದಿಂದ ಕೊಂಕಣಿ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದು ವಿಶ್ವ ಕೊಂಕಣಿ ಕೇಂದ್ರ ವಿಷಾದ ವ್ಯಕ್ತಪಡಿಸಿದೆ. ಅಮೋಣಕರವರು ತಮ್ಮ ಮೃತ ಶರೀರವನ್ನು ಗೋವಾ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ದಾನ ಕೊಡಬೇಕೆಂದು ಬರೆದಿರಿಸಿದ್ದಾರೆ.