ಜಪ್ಪು: ಜಪ್ಪು ಮಹಾಕಾಳಿಪಡ್ಪು ಏರಾಡಿ ಬಳಿಯಲ್ಲಿರುವ ಬೃಹತ್ ತೋಡಿನಲ್ಲಿ ನೀರು ಸರಾಗವಾಗಿ ಹರಿಯದಿರುವುದನ್ನು ಕಂಡು ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿಯು ಮಾಜಿ ಶಾಸಕ ಶ್ರೀ ಜೆ. ಆರ್. ಲೋಬೊ ರವರ ನೇತೃತ್ವದಲ್ಲಿ ದ.ಕ. ಜಿಲ್ಲಾಧಿಕಾರಿಯವರಿಗೆ, ಉಸ್ತುವಾರಿ ಸಚಿವ ಯು.ಟಿ. ಖಾದರ್ ರವರ ಸಮ್ಮುಖದಲ್ಲಿ ಮನವಿಯನ್ನು ನೀಡÀಲಾಯಿತು. ಈ ಬೃಹತ್ ತೋಡಿನಲ್ಲಿ ಬಹಳಷ್ಟು ಹೂಳು ತುಂಬಿರುವುದು ಮಾತ್ರವಲ್ಲದೇ ಡ್ರೈನೇಜ್ ನೀರು ಸೇರಿಕೊಂಡು ಬಹಳಷ್ಟು ಮಲಿನವಾಗಿದೆ. ಸಾಂಕ್ರಾಮಿಕ ರೋಗಳು ಹರಡುವ ಭೀತಿಯಲ್ಲಿದೆ. ಅದಲ್ಲದೇ ಈ ಬೃಹತ್ ತೋಡು ಮಹಾಕಾಳಿಪಡ್ಪು ಪಟ್ನ ಬಳಿಯ ರಾಷ್ಟ್ರೀಯ ಹೆದ್ದಾರಿಯ ಮಧ್ಯದಲ್ಲಿ ಹಾದುಹೋಗಿರುತ್ತದೆ. ಈ ತೋಡಿನಲ್ಲಿ ನೀರು ಹರಿಯದೇ ಅಲ್ಲಿಯೂ ನಿಂತು ಅಲ್ಲಿ ವಾಸಿಸುತ್ತಿರುವ ಜನರಿಗೆ ಬಹಳಷ್ಟು ತೊಂದರೆಯಾಗಿದೆ. ಅದಲ್ಲದೇ ಮಳೆಗಾಲದಲ್ಲಿ ತೋಡಿನಲ್ಲಿ ನೀರು ಉಕ್ಕಿ ಹರಿದು ಆ ಪ್ರದೇಶದ ಮನೆಗಳಿಗೆ ನುಗ್ಗಿ ಅಪಾಯ ಸಂಭವವಾಗುವ ಪರಿಸ್ಥಿತಿ ಉಂಟಾಗಿರುವುದರಿಂದ ಅದನ್ನು ಸರಿಪಡಿಸಲು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ಮನವಿಯನ್ನು ಸಲ್ಲಿಸಿದೆ. ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷ ಅಬ್ದುಲ್ ಸಲೀಮ್, ಮಾಜಿ ಮನಪಾ ಸದಸ್ಯರಾದ ಶೈಲಜಾ, ಅಪ್ಪಿ ಹಾಗೂ ಪಕ್ಷದ ಪದಾಧಿಕಾರಿಗಳಾದ ಟಿ.ಕೆ. ಸುಧೀರ್, ಸದಾಶಿವ ಅಮೀನ್, ಸುರೇಶ್ ಶೆಟ್ಟಿ, ದಿನೇಶ್ ರಾವ್, ಮೊಹಮ್ಮದ್ ನವಾಝ್, ಸೀತಾರಾಮ ಮೊದಲಾದವರು ಉಪಸ್ಥಿತಿರಿದ್ದರು.