ಬೆಂಗಳೂರು:- ದೀಪಾವಳಿ ಆಚರಿಸಲು ಕೂಡ ಈ ಬಾರಿ ಸರ್ಕಾರವೇ ಅನುಮತಿ ಕೊಡುವಂತೆ ಮಾಡಿದೆ ಈ ಕೊರೊನಾ ವೈರಸ್. ಹೌದು ದೀಪಾವಳಿ ಆಚರಿಸಲು ರಾಜ್ಯ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಈಗಾಗಲೇ ಜಾರಿಯಲ್ಲಿರುವ ಎಸ್‌ಓಪಿ ಜೊತೆಗೆ ಹಲವು ನಿರ್ಬಂಧ ಹಾಕಲಾಗಿದೆ. ಕಂಟೈನ್‌ಮೆಂಟ್ ವಲಯಗಳನ್ನು ಹೊರತು ಪಡಿಸಿ ಉಳಿದೆಡೆ ಲಾಕ್‌ಡೌನ್ ಮಾರ್ಗಸೂಚಿಗಳನ್ನು ಸಡಲಿಸಲಾಗಿದೆ.

ಆದರೆ ದೀಪಾವಳಿ ಆಚರಣೆ ಸಂದರ್ಭದಲ್ಲಿಯೂ 100 ಸಂಖ್ಯೆ ಮೀರದಂತೆ ಜನರು ಸೇರಲು ಕೊಟ್ಟಿರುವ ಅನುಮತಿ ಮುಂದುವರೆಯುತ್ತಿದೆ. ಜೊತೆಗೆ ಪಟಾಕಿ ಮಾರಾಟ ಮಾಡುವುದು ಸೇರಿದಂತೆ ಹಲವು ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಬರುವ ನವೆಂಬರ್ 14 ರಿಂದ 17ರ ವರೆಗೆ ದೀಪಾವಳಿ ಹಬ್ಬದ ಆಚರಣೆ ಇರಲಿದೆ. ನವೆಂಬರ್ 14 ರಂದು ನರಕ ಚತುರ್ದಶಿ, ನವೆಂಬರ್ 15 ದೀಪಾವಳಿ ಅಮವಾಸ್ಯೆ, ನ. 16 ಬಲಿಪಾಡ್ಯಮಿ ಹಾಗೂ ಮರುದಿನ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ್ ಭಾಸ್ಕರ್ ಅವರು ಹೊರಡಿಸಿದ್ದಾರೆ.

ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಹಬ್ಬವನ್ನು ಸರಳವಾಗಿ ಮತ್ತು ಸಾಂಕ್ರಾಮಿಕ ರೋಗ ಹರಡದಂತೆ ಆಚರಿಸಲು ಸರ್ಕಾರ ಸೂಚಿಸಿದೆ. ಹೀಗಾಗಿ ಸದ್ಯ ಜಾರಿಯಲ್ಲಿರುವ ಮಾರ್ಗಸೂಚಿಗಳೇ ಮುಂದುವರೆಯಲಿದ್ದು, ಪಟಾಕಿ ಮಾರಾಟ ಮಾಡಲು ಮಾತ್ರ ಹೊಸದಾಗಿ ನಿರ್ದೇಶನಗಳನ್ನು ಸರ್ಕಾರ ನೀಡಿದೆ.

ಸಂಬಂಧಿಸಿದ ಸ್ಥಳೀಯ ಆಡಳಿತದಿಂದ ಪಟಾಕಿ ಮಾರಾಟ ಮಾಡಲು ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಪಟಾಕಿ ಅಂಗಡಿಗಳನ್ನು ನವೆಂಬರ್ 1 ರಿಂದ 17ರ ವರೆಗೆ ಮಾತ್ರ ತೆರೆಯಲು ಅವಕಾಶ ಮಾಡಿಕೊಡಲಾಗಿದೆ.

ಸಾರ್ವಜನಿಕ ವಸತಿ ಪ್ರದೇಶಗಳಿಂದ ದೂರವಿರುವ ಆಟದ ಮೈದಾನ ಅಥವಾ ಬಯಲು ಪ್ರದೇಶಗಳಲ್ಲಿ ಪಟಾಕಿ ಅಂಗಡಿಗಳನ್ನು ತೆರೆಯಬೇಕು. ಪಟಾಕಿ ಮಾರಾಟ ಮಾಡುವ ಮಳಿಗೆಗಳ ಸುತ್ತಲೂ ದಿನಾಲೂ ಸಾನಿಟೈಸೇಷನ್ ಮಾಡಬೇಕು. ಗ್ರಾಹಕರಿಗೆ ಥರ್ಮಲ್ ಸ್ಕ್ಯಾನಿಂಗ್ ಹಾಗೂ ಸ್ಯಾನಿಟೈಸರ್ ವ್ಯವಸ್ಥೆಯನ್ನು ಮಾಡಬೇಕು. ಗ್ರಾಹಕರ ಮಧ್ಯೆ ಕನಿಷ್ಟ 6 ಅಡಿ ಅಂತರ ಇರುವಂತೆ ನೋಡಿಕೊಳ್ಳಬೇಕು. ಜನದಟ್ಟಣೆ ಆಗದಂತೆ ನೋಡಿಕೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಿದ್ದಾರೆ.