ಪಕ್ಕದ ಮನೆಯತ್ತ ಕತ್ತು ಚಾಚಲು ಮರೆಯದಿರಿ

ಅಲ್ಲೇನಿಲ್ಲ ಅನ್ನುವತ್ತ ಗಮನವಿರಲಿ

ನಮ್ಮ ಪಾಲಲಿ ಅವರಿಗೂ ಸ್ವಲ್ಪವಿರಲಿ

ನಮ್ಮ ದೀವಳಿಗೆಯಲಿ ಅವರೂ ಇರಲಿ


ಕಿವಿಗಳನ್ನು ಅವರ ಗೋಡೆಗಾನಿಸಿ ಕೇಳಿ

ಸದ್ದೇನಾದರೂ ಇದೆಯೋ ಕಿವಿಗೊಡಿ

ನಮ್ಮ ಮತಾಪು-ನಕ್ಷತ್ರಕಡ್ಡಿಗಳ ಸದ್ದಲಿ 

                                 ಅವರೂ ಮುಳುಗೇಳಲಿ

ನಮ್ಮ ದೀವಳಿಗೆಯಲಿ ಅವರೂ ಇರಲಿ


ಮೂಗು ಸ್ವಲ್ಪ ಅಲ್ಲೂ ತೂರಲಿ,

ಮೂಸಿ ನೋಡಿ, ಬೇಡ ಸಂಕೋಚ

ನಿಮ್ಮ ಮೃಷ್ಟಾನ್ನ ಭೊಜನದಲಿ 

                          ಅವರಿಗೂ ಒಂದು ಪಾಲಿರಲಿ

ನಮ್ಮ ದೀವಳಿಗೆಯಲಿ ಅವರೂ ಇರಲಿ


ಬಾಯಿ ತೆರೆದು ಬೇಕಾದಷ್ಟು ಮಾತಾಡಿ

ಅವರ ಮೌನಚಕ್ರವ್ಯೂಹವನದು ಭೇದಿಸಲಿ

ಬಡಬಾಗ್ನಿ ಜ್ವಾಲೆಯನು 

                  ನಿಮ್ಮ ತಂಪು ಮಾತು ತಣಿಸಲಿ

ನಮ್ಮ ದೀವಳಿಗೆಯಲಿ ಅವರೂ ಇರಲಿ


ಹೊಟ್ಟೆಯ ತುಂಬಾ ಕಿಚ್ಚಿರಲಿ

ಮತ್ಸರದ್ದಲ್ಲ, ಕರುಣೆಯದಿರಲಿ

ಎಲ್ಲಾ ಪಡೆದ ಧನ್ಯರು ನಾವು, 

                       ನಮ್ಮ ಅರಿವಲಿ ಅವರಿರಲಿ

ನಮ್ಮ ದೀವಳಿಗೆಯಲಿ ಅವರೂ ಇರಲಿ


ದೀವಳಿಗೆಯ ಪೆಂಪು-ಕಂಪು 

                                  ಈ ಬಾರಿ ಹೊಸದಿರಲಿ

ನೆರೆಮನೆಯ ಬಡತನಕೆ ಮನ ಮರುಗಲಿ

ಗೂಡುದೀಪವದು ತುಸು ಅವರತ್ತ ಜರುಗಲಿ

ಕೊಂಚ ಬೆಳಕು ನಮ್ಮನೆಯದು ಅಲ್ಲೂ ಚೆಲ್ಲಲಿ

ಕೊಂಚ ಬೆಳಕು ನಮ್ಮನೆಯದು ಅಲ್ಲೂ ಚೆಲ್ಲಲಿ


                        - ಎರಿಕ್ ಸೋನ್ಸ್ ಬಾರಕೂರು