ಸ್ವಗತ

ಈ ಜಗವ

ಜೀವರಾಶಿಯ

ಸೃಷ್ಟಿಸಿದ ದೇವ

ಒಂದು ಹಿಡಿಮಣ್ಣ ತೆಗೆದು

ತನ್ನ ಹೋಲುವ

ರೂಪವ ಮಾಡಿ

ಉಸಿರೂದಿ

ರೂಪಿಸಿದ ಆದಾಮನ

ಎನ್ನರಮಣನ|


ಅವನ ಜೀವದ, ಭಾವನೆಯ

ಗೂಡರಕ್ಷಿಪ

ಪಕ್ಕೆಲುಬ ಕಿರುತುಂಡ

ಮುರಿದು ಚೆಲುವಿನ

ಚಿಲುಮೆಯಾಗಿ

ಎನ್ನ ಸೃಷ್ಟಿಸಿದನಂತೆ ಆ ದೇವಾ|


ಎನಗಿಂತ ಅದ್ಭುತ ಸೃಷ್ಟಿಯ

ಮಾಡಲಾರೆನೆಂದು

ಸೃಷ್ಟಿಕಾರ್ಯವ ನಿಲ್ಲಿಸಿದ ದೇವಾ|


ನನ್ನ ಜೀವದ ಜೀವ ನೀನು

ದೇಹದ ಭಾಗ ನೀಗು

ಎಂದುಳಿದ ಆದಾಮ ಎನಗೆ|


ನಡೆದಾಡಿದೆವು

ನಾವಿಬ್ಬರು

ಹುಟ್ಟುಡುಗೆಯಲಿ

ದೈವೀಕ ತೋಟದಲಿ

ಮುಗ್ಧ ಮಕ್ಕಳಾಗಿ|


ದೇವಕರೆದು

ಹೇಳಿದರೆಮಗೆ

ನೋಡಿ ಅದೋ,

ಅದು ಅರಿವಿನಮರ

ತಿನ್ನದಿರಿ ಆ ಮರದಹಣ್ಣ

ತಿಂದರಾಗುವಿರಿ ನಾಶ|


ತಿನ್ನುವಾಶೆ ಅªನಿಗಿರಲಿಲ್ಲ

ನನಗೂ ಇರಲಿಲ್ಲ

ಆ ಸರ್ಫ ಎನ್ನ ಕೆಣಕುವ ತನಕ


ನಾತಿಂದೆ ಅವನಿಗಿತ್ತೆ

ನಮಗರಿವಾಯಿತು

ನಮಗಿಲ್ಲವಲ್ಲ ಅರಿವೆ.


ದೇವಬರಲು

ಸೊಪ್ಪನುಟ್ಟೆವು

ಅಡಗಿಕುಳಿತೆವು|


ದೇವನೋಡಿದ

ಕೋಪಗೊಂಡ

ದೈವಿಕತೆಯ ಕತೆಯು ಮುಗಿಯಿತು|

ಭೌತಿಕತೆಯ ಬಾಳು

ಬೆಳೆಯಿತು|

  ಮಾರ್ಸೆಲ್ ಡಿ ಸೋಜ

ಮಂಗಳೂರು