ಪುತ್ತೂರು : ಸ್ವಚ್ಛತೆಯ ಪರಿಕಲ್ಪನೆ ಪ್ರತಿಯೊಬ್ಬ ಪ್ರಜೆಯ ಮನದ ಇಂಗಿತವಾಗಬೇಕು.  ಆಗ ಸ್ವಸ್ಥ ಸಮಾಜ, ದೇಶ ನಿರ್ಮಾಣ ಸಾಧ್ಯ. ಯಾವುದೇ ಶಿಕ್ಷಣ ಮನುಷ್ಯನ ವ್ಯಕ್ತಿತ್ವವನ್ನು ಧನಾತ್ಮಕವಾಗಿ ಪರಿವರ್ತಿಸುವಂತಾದರೆ ಅದಕ್ಕಿಂತ ದೊಡ್ಡ ಪದವಿಯಿಲ್ಲ ಎಂದು ಸಂತ ಫಿಲೋಮಿನಾ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ವಂ. ಡಾ. ಆ್ಯಂಟನಿ ಪ್ರಕಾಶ್ ಮೊಂತೇರೊ ಹೇಳಿದರು.

ಸಂತ ಫಿಲೋಮಿನಾ ಕಾಲೇಜಿನಈ ಶೈಕ್ಷಣಿಕ ವರ್ಷದ ಎನ್ನೆಸ್ಸೆಸ್  ಕಾರ್ಯಚಟುವಟಿಕೆಗಳನ್ನು ಬೆಳ್ಳಿಹಬ್ಬ ಸಭಾಂಗಣದಲ್ಲಿ ಉದ್ಘಾಟಿಸಿ, ಮಾತನಾಡಿದರು. ವಿದ್ಯಾರ್ಥಿ ಬದುಕಿನಲ್ಲಿ ಶಿಸ್ತು, ನಾಯಕತ್ವ ಮತ್ತು ಸಾಮರಸ್ಯವನ್ನು ಕಲಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಪ್ರಮುಖ ಪಾತ್ರ ವಹಿಸುತ್ತದೆ. ಘಟಕವು ಹಮ್ಮಿಕೊಳ್ಳುವ ಎಲ್ಲ ರೀತಿಯ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ, ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಕರೆ ಇತ್ತರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥ ರಾಧಾಕೃಷ್ಣ ಗೌಡ ವಿ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ ಭಾರತದಲ್ಲಿ ಐವತ್ತು ವರ್ಷಗಳನ್ನು ಪೂರೈಸಿದೆ. ಶಿಸ್ತು, ಸಂಯಮ, ಸಹಬಾಳ್ವೆ ಹಾಗು ಸೇವೆಯೇ ಈ ಯೋಜನೆಯ ಮೂಲ ಉದ್ದೇಶ. ವಿದ್ಯಾರ್ಥಿಗಳನ್ನು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ಹುಟ್ಟು ಹಾಕಲಾಯಿತು ಹಾಗೆಯೇ ಎನ್‍ಎಸ್‍ಎಸ್ ಘಟಕವು ಪದವಿ ಕಾಲೇಜುಗಳಲ್ಲಿ ಕಡ್ಡಾಯವಾಗಿ ಕಾರ್ಯಗತಗೊಳಿಸಲಾಯಿತು. ಪ್ರಸ್ತುತ 330 ವಿಶ್ವವಿದ್ಯಾನಿಲಯಗಳಲ್ಲಿ 3.8 ಮಿಲಿಯನ್ ವಿದ್ಯಾರ್ಥಿಗಳು ಎನ್‍ಎಸ್‍ಎಸ್ ಕಾರ್ಯಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಶಾಲಾ ಕಾಲೇಜುಗಳು ಕೊಡುವ ಬೌದ್ಧಿಕ ಚಿಂತನೆಯ ಜೊತೆಗೆ ಸಾಮಾಜಿಕ ಕಳಕಳಿಯನ್ನು ಬಿತ್ತುವ ನಿಟ್ಟಿನಲ್ಲಿ ಈ ಕಾರ್ಯಚಟುವಟಿಕೆಗಳು ಮಹೋನ್ನತ ಪಾತ್ರವಹಿಸುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಆದ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ ಮಾತನಾಡಿ, ದೇಶ ಸೇವೆಗೆ ಪಣತೊಟ್ಟು ನಿಂತ ಪ್ರಾತಾಪ ಚಂದ್ರಸಾರಂಗಿಯಂತಹ ವ್ಯಕ್ತಿಗಳು ನಮಗೆ ಮಾದರಿಯಾಗಬೇಕು. ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು, ಸೇವೆಯ ತುಡಿತವಿರಬೇಕು. ನೋವಿಗೆ, ಕಷ್ಟಕ್ಕೆ, ದೀನರಿಗೆ, ದುರ್ಬಲರಿಗೆ ಸ್ಪಂದಿಸುವ ಮನಸ್ಸಿರಬೇಕು. ಆಗ ಮಾತ್ರ ಸೇವೆ ಮಾಡಲು ಸಾಧ್ಯ ಎಂದು ತಿಳಿಸಿದರು.

ಅರ್ಪಿತಾ ಮತ್ತು ತಂಡದವರು ಸ್ವಾಗತಿಸಿದರು. ಎನ್‍ಎಸ್‍ಎಸ್ ಕಾರ್ಯಕ್ರಮಾಧಿಕಾರಿ ದಿನಕರ್ ಆಂಚನ್ ಸ್ವೌಗತಿಸಿದರು. ಕಾರ್ಯಕ್ರಮಾಧಿಕಾರಿ ಶಶಿಪ್ರಭಾ ಬಿ ವಂದಿಸಿದರು.  ತೃತೀಯ ಬಿಎಸ್ಸಿ ವಿದ್ಯಾರ್ಥಿನಿ ಪೂಜಾ ನಿರೂಪಿಸಿದರು