ಮಂಗಳೂರು:  ಕಳೆದೊಂದು ತಿಂಗಳಿಂದ ಹೂಳು, ಕೆಸರು ನೀರು ತುಂಬಿಕೊಂಡು ವಾಹನ ಸವಾರರಿಗೆ ಕಂಟಕಪ್ರಾಯವಾಗಿದ್ದ ರಾ.ಹೆ. 66ರ ಕೊಟ್ಟಾರ ಫ್ಲೈ ಓವರ್-ಕೋಡಿಕಲ್ ತಿರುವಿನ ರಸ್ತೆಯನ್ನು ದ.ಕ. ಜಿಲ್ಲಾ ಶಾಲಾ ಮಕ್ಕಳ ಚಾಲಕರ ಸಂಘದ ಸದಸ್ಯರೇ ಸ್ವಚ್ಛಗೊಳಿಸಿ ಮಾದರಿಯಾಗಿದ್ದಾರೆ. ಇಲ್ಲಿನ ರಸ್ತೆಯ ಬದಿ ನಿಂತಿದ್ದ ನೀರನ್ನು ತೆಗೆದು ಹೆದ್ದಾರಿ ಶುಚಿಗೊಳಿಸುವಂತೆ ಕೆಲವು ಬಾರಿ ಮಹಾನಗರಪಾಲಿಕೆಗೆ ದೂರನ್ನೂ ನೀಡಲಾಗಿತ್ತು. ಆದರೂ ಮನಪಾ ಈ ಬಗ್ಗೆ ಕ್ರಮ ಕೈಗೊಂಡಿರಲಿಲ್ಲ. ಫ್ಲೈ ಓವರ್‍ನಿಂದ ಸಾಗಿಬರುವ ವಾಹನ ಸವಾರರಿಗೆ ಹೆದ್ದಾರಿಯಲ್ಲಿ ನೀರು ನಿಂತಿದ್ದು ಕಾಣದೆ ಅಪಘಾತ ಸಂಭವಿಸುವ ಸಾಧ್ಯತೆಯೂ ಇತ್ತು. ಇದನ್ನು ಮನಗಂಡ ಶಾಲಾ ಮಕ್ಕಳ ಚಾಲಕರ ಸಂಘದ ಸದಸ್ಯರು ತಾವೇ ಮುಂದೆ ನಿಂತು ಸ್ವಚ್ಛತಾ ಕಾರ್ಯ ನಡೆಸಿಕೊಟ್ಟಿದ್ದಾರೆ. ಇಂದು ಮುಂಜಾನೆ ಸ್ವಯಂಪ್ರೇರಿತರಾಗಿ ಸಂಘದ ಸದಸ್ಯರು ಹಾರೆ, ಗುದ್ದಲಿ ಹಿಡಿದು ರಸ್ತೆಯ ಬದಿಯಲ್ಲಿ ಸಂಗ್ರಹವಾಗಿದ್ದ ಕೆಸರು ನೀರು, ಹೂಳು, ಕಸವನ್ನು ತೆಗೆದು ಸ್ವಚ್ಛಗೊಳಿಸಿದ್ದಾರೆ. ಸಂಘದ ಪದಾಧಿಕಾರಿಗಳಾದ ಮೋಹನ್ ಅತ್ತಾವರ, ಕುಮಾರ್ ಮಾಲೆಮಾರ್, ಕಿರಣ್ ಲೇಡಿಹಿಲ್, ರೆಹಮಾನ್ ಖಾನ್ ಕುಂಜತ್ತಬೈಲ್, ಸತೀಶ್ ಪೂಜಾರಿ, ಶಂಕರ್ ಶೆಟ್ಟಿ, ಚರಣ್, ರಾಘವೇಂದ್ರ, ನಟೇಶ್, ದಿನೇಶ್, ಮಹೇಶ್, ನರೇಂದ್ರ, ಹರೀಶ್, ನವೀನ್, ನಾಗರಾಜ್, ಸಂಚಾರಿ ಠಾಣಾ ಪೊಲೀಸ್ ಸಿಬ್ಬಂದಿ ಪವನ್ ಮುಂತಾದವರು ಉಪಸ್ಥಿತರಿದ್ದರು.