ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಆಶ್ರಯದಲ್ಲಿ ಭಾರತದ ಮಾಜಿ ಪ್ರಧಾನಿ ರಾಜೀವ ಗಾಂಧಿಯವರ ಜನ್ಮ ದಿನದ ಅಂಗವಾಗಿ ಸದ್ಭಾವನಾ ದಿನಾಚರಣೆಯನ್ನು ಆನ್‍ಲೈನ್ ವೆಬಿನಾರ್ ಮೂಲಕ ಆಗಸ್ಟ್ 20 ರಂದು ಆಚರಿಸಲಾಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ ಮಾತನಾಡಿ, ಯುವ ಸಮುದಾಯದಲ್ಲಿ ದೇಶಪ್ರೇಮವು ಜಾಗೃತಗೊಂಡು ಧನಾತ್ಮಕ ಚಿಂತನೆಗಳ ಮೂಲಕ ಸದ್ಭಾವನೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿ, ಶುಭ ಹಾರೈಸಿದರು.

ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ವಿಜಯ ಕುಮಾರ್ ಮೊಳೆಯಾರ್ ಸದ್ಭಾವನಾ ದಿನದ ಪ್ರತಿಜ್ಞಾ ವಿಧಿಯನ್ನು ಬೋಧಿಸಿ, ನಮ್ಮ ದೇಶವು ವಿವಿಧತೆಯಲ್ಲಿ ಏಕತೆಗೆ ವಿಶೇಷ ಮನ್ನಣೆಯನ್ನು ಹೊಂದಿದೆ. ವಿವಿಧ ಜಾತಿ, ಮತ, ಭಾಷೆ, ಸಂಸ್ಕೃತಿಯ ಜನರು ಏಕತೆಯಿಂದ ಕಾರ್ಯ ನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿ. ಈ ರಾಷ್ಟ್ರದ ಪ್ರತಿಯೊಬ್ಬ ಪ್ರಜೆಯೂಧರ್ಮ ಸಾಮರಸ್ಯದಿಂದ ಜೀವಿಸುವ ಸಂಕಲ್ಪ ಕೈಗೊಂಡಾಗ ದೇಶವು ವಿಶ್ವ ಮಾನ್ಯತೆಯನ್ನು ಹೊಂದಲು ಸಾಧ್ಯ ಎಂದರು.

ಎನ್ನೆಸ್ಸೆಸ್ ಘಟಕದ ಕಾರ್ಯಕ್ರಮಾಧಿಕಾರಿ ಶಶಿಪ್ರಭಾ ಸ್ವಾಗತಿಸಿ, ಸ್ವಯಂಸೇವಕಿ ಸಹನಾ ಪಿ ಜಿ ವಂದಿಸಿದರು. ಕಾರ್ಯಕ್ರಮಾಧಿಕಾರಿ ದಿನಕರ್ ಅಂಚನ್ ನಿರೂಪಿಸಿದರು.