ಬಂಟ್ವಾಳ: ರಾಜ್ಯದ 15 ವಿಧಾನ ಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ 12 ಸ್ಥಾನಗಳಲ್ಲಿ ಬಿ.ಜೆ.ಪಿ. ಭರ್ಜರಿ ಜಯಗಳಿಸಿರುವ ಹಿನ್ನಲೆಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ನೇತೃತ್ವದಲ್ಲಿ ಬಿ.ಸಿ.ರೋಡಿನ ಸಂಭ್ರಮಾಚರಿಸಿದರು. ಈ ಸಂದರ್ಭದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಶಾಸಕ ರಾಜೇಶ್ ನಾಯ್ಕ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ನಿರಂತರ ಪರಿಶ್ರಮ ಹಾಗೂ ಪಕ್ಷದ ಕಾರ್ಯಕರ್ತರ, ಸ್ಥಳೀಯ ನಾಯಕರು ಒಗ್ಗಟ್ಟಾಗಿ ದುಡಿದ ಪರಿಣಾಮ ಅಭೂತಪೂರ್ವವಾದ ಗೆಲುವು ಸಾಧಿಸಲಾಗಿದ್ದು,ತನ್ಮೂಲಕ ರಾಜ್ಯದ ಜನರ ಆಶಯದಂತೆ ಸಿಎಂ ಬಿ.ಎಸ್ .ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಸುಭದ್ರವಾಗಿದೆ ಎಂದರು. ವಿಪಕ್ಷಗಳ ಅಪಪ್ರಚಾರಕ್ಕೆ ಉಪಚುನಾವಣೆಯಲ್ಲಿ ಜನತೆ ತಕ್ಕ ಉತ್ತರ ನೀಡಿದ್ದು, ಮುಂದಿನದಿನದಲ್ಲಿ ಕರ್ನಾಟಕ ರಾಜ್ಯದಲ್ಲಿ ಅಭಿವೃಧ್ದಿಯ ಶಕೆ ಆರಂಭವಾಗಲಿದೆ ಎಂದರು.
ಕಾಂಗ್ರೆಸ್ ನಾಯಕರು ಮನೆಗೆ :ಹರಿಕೃಷ್ಣ ಇದೇ ವೇಳೆ ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ ಅವರು ಮಾತನಾಡಿ ಅನರ್ಹ ಶಾಸಕರೆಂದು ಟೀಕೆ ಮಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ,ಭ್ರಷ್ಟಾಚಾರದ ಮೂಟೆ ಹೊತ್ತು ಜೈಲಿಗೆ ಹೋಗಿ ಬಂದ ಡಿಕೆಶಿ ಮತ್ತು ಕಾಂಗ್ರೆಸ್ ನಾಯಕರು ಉಪಚುನಾವಣೆಯ ಫಲಿತಾಂಶದ ಬಳಿಕ ಆನರ್ಹರಾಗಿದ್ದು,ಅವರು ಮನೆಗೆ ಹೋಗಿದ್ದಾರೆ ಎಂದು ಲೇವಡಿ ಮಾಡಿದರು.ಕಿಚಿಡಿ ಸರಕಾರ ಬೇಡ,ಅಭಿವೃದ್ದಿ ಪರ ಚಿಂತನೆಯ ಸಿಎಂ ಯಡಿಯೂರಪ್ಪ ನೇತೃತ್ವದ ಸುಭದ್ರ ಸರಕಾರ ಬೇಕೆಂದು ಜನ ಬಯಸಿ ಬಿಜೆಪಿಯನ್ನು ಗೆಲ್ಲಿಸಿದ ಮತದಾರರನ್ನು ಅಭಿನಂದಿಸಿದರು. ಈ ಸಂದರ್ಭ ಕಾರ್ಯಕರ್ತರು ಪಟಾಕಿ ಸಿಡಿಸಿ,ಸಿಹಿ ಹಂಚಿ ,ಪಕ್ಷದ ಧ್ವಜ ಹಿಡಿದು ವಿಜಯೊತ್ಸವದ ಸಂಭ್ರಮ ಆಚರಿಸಿದರು. ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವದಾಸ ಶೆಟ್ಟಿ,ರಾಜ್ಯ ಸಹವಕ್ತಾರೆ ಸುಲೋಚನಾ ಜಿ.ಕೆ.ಭಟ್,ಮುಖಂಡರಾದ ರಾಮದಾಸ್ ಬಂಟ್ವಾಳ,ದಿನೇಶ್ ಅಮ್ಟೂರು,ರಮಾನಾಥ ರಾಯಿ,ಸೀತಾರಾಮ ಪೂಜಾರಿ,ಪ್ರಮೋದ್ ಕುಮಾರ್ ಅಜ್ಜಿಬೆಟ್ಟು,ರೋನಾಲ್ಡ್ ಡಿಸೋಜ ಅಮ್ಟಾಡಿ,ಖಲೀಲ್ ಬಂಟ್ವಾಳ, ಗಣೇಶ್ ರೈ ಮಾಣಿ,ಪುಷ್ಪರಾಜ್ ಶೆಟ್ಟಿ,ಸುರೇಶ್ ಕೋಟ್ಯಾನ್,ಪ್ರಕಾಶ್ ಅಂಚನ್, ಪುರುಷೋತ್ತಮ ಶಟ್ಟಿ ವಾಮದಪದವು,ಆನಂದ ಎ.ಶಂಭೂರು,ಸಂತೋಷ್ ಕುಮಾರ್ ರಾಯಿಬೆಟ್ಟು,ಜಯರಾಮ ರೈ ಮೊದಲಾದರಿದ್ದರು.