ಬಂಟ್ವಾಳ:  ಸರಕಾರದ ಸವಲತ್ತಿನ ಮಾಹಿತಿ ಮತ್ತು ಮಲೇರಿಯಾ,ಡೆಂಗ್ಯು ರೋಗದ ಕುರಿತು ಮುಂಜಾಗೃತಾಕ್ರಮವಾಗಿ ಪ್ರಚುರಪಡಿಸಲು ಮನೆ,ಮನೆಗೆ ಭೇಟಿ ನೀಡಲು ಬರುವ  ಆಶಾ ಕಾರ್ಯಕರ್ತೆಯರಿಗೆ ಕರ್ತವ್ಯಕ್ಕೆ ಅಡ್ಡಿಪಡಿಸುವ  ದೂರಿನ ಬಂದಿರುವ ಹಿನ್ನಲೆಯಲ್ಲಿ ಅಂತವರ  ಮೇಲೆ  ಸೂಕ್ತವಾದ ಕಾನೂನು ಕ್ರಮಕೈಗೊಳ್ಳುವಂತೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಜಿಲ್ಕಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಸೂಚಿಸಿದ್ದಾರೆ.

ಸರಕಾರದ ವಿವಿಧ ಸವಲತ್ತಿನ ಮಾಹಿತಿ ನೀಡಲು ಮನೆಮನೆಗೆ ಬರುವ ಆಶಾ ಕಾರ್ಯಕರ್ತೆರ ಕರ್ತವ್ಯಕ್ಕೆ ಅಡ್ಡಿಪಡಿಸುವುದಲ್ಲದೆ ಅವರ ವೀಡಿಯೋ ಚಿತ್ರೀಕರಣಗೊಳಿಸಿ  ಸಾಮಾಜಿಕ ಜಾಲತಾಣದಲ್ಲು ಹರಿಯಬಿಡಲಾಗುತ್ತಿದೆ ಎಂಬ  ದೂರು ಬಂದ ಹಿನ್ನಲೆಯಲ್ಲಿಈವಿಚಾರವನ್ನು ಶಾಸಕರು ಎಸ್ಪಿ ಲಕ್ಷ್ಮೀಪ್ರಸಾದ್ ಅವರ ಗಮನಕ್ಕೆ ತಂದು ಅಂತಹವರ ಮೇಲೆ ಕಾನೂನು ಕ್ರಮಕ್ಕೆ ಸೂಚಿಸಿದ್ದಾರೆ.

ಪಾಣೆಮಂಗಳೂರು ಸಮೀಪದ ಗೂಡಿನಬಳಿ,ಮಂಚಿ ಮೊದಲಾದ ಪರಿಸರದಲ್ಲಿ ಆಶಾ ಕಾರ್ಯಕರ್ತೆಯರು ಮನೆ,ಮನೆ ಭೇಟಿ ನೀಡಿದ  ವೇಳೆ  ಅವರ ಕರ್ತವ್ಯಕ್ಕೆ ಅಡ್ಡಿಪಡಿಸಲಾಗಿದೆಯಲ್ಲದೆ ಅವಾಚ್ಯವಾಗಿ ನಿಂದಿಸಲಾಗಿದೆ ಎಂದು ದೂರಲಾಗಿದೆ. ಹಾಗೆಯೇ ಮಂಚಿ ಆರೋಗ್ಯ ಕೇಂದ್ರ ದಲ್ಲಿ ಸಿ.ಡಿ.ಪಿ.ಒ.ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಜಂಟಿ ಆಶ್ರಯದಲ್ಲಿ ಭೇಟಿ ಬಚಾವೋ ಭೇಟಿ ಪಡಾವೋ ಯೋಜನೆಯ  ಫಲಾನುಭವಿಗಳ ದಾಖಲೆಗಳನ್ನು ಪರಿಶೀಲನೆ ನಡೆಸುವ ವೇಳೆ ಕೇಂದ್ರದ ಒಳಗೆ ಅಕ್ರಮವಾಗಿ ಪ್ರವೇಶಗೈದ ಕೆಲವರು  ಇಲ್ಲೂ ಕೂಡ ಕರ್ತವ್ಯ ಕ್ಕೆ ಅಡ್ಡಿಪಡಿಸಿದ್ದಾರೆ ಎಂದು  ಬಂಟ್ವಾಳ ಆರೋಗ್ಯಾಧಿಕಾರಿ ಯವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ನೀಡಿದ್ದಾರೆ.

ಇದೀಗ ಶಾಕರಿಗೂ ಬಂದ ದೂರಿನ ಹಿನ್ನೆಲೆಯಲ್ಲಿ ಶಾಸಕ ರಾಜೇಶ್ ನಾಯ್ಕ್ ಅವರು ಎಸ್.ಪಿ.ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಈ ಬಗ್ಗೆ  ಸೂಕ್ತ ಕ್ರಮಕ್ಕೆ ಸೂಚಿಸಿದ್ದಾರೆ.

ಇದರ ಬಗ್ಗೆ ತನಿಖೆ ನಡೆಸಿ ಕ್ರಮಕೈಗೊಳ್ಳುವುದಾಗಿ ಎಸ್.ಪಿ.ಭರವಸೆ ನೀಡಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ.