ಬಂಟ್ವಾಳ: ಮಂಗಳೂರಿನ ತೊಕ್ಕೊಟ್ಟು ಸಮೀಪದ ಕುತ್ತಾರು ಆದಿಸ್ಥಳದಲ್ಲಿ ಸುಮಾರು 7ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀ ರಕ್ತೇಶ್ವರಿ ಏಳ್ವೆರ್ ಸಿರಿ ಕೊರಗಜ್ಜ ಕ್ಷೇತ್ರದ ಅಭಿವೃದ್ಧಿ ಕೆಲಸಕ್ಕೆ ಹುಂಡಿ ಹಣ ಸಂಗ್ರಹಿಸಿ ನೀಡುವ ಮೂಲಕ ಗಾಣಿಗರು ಸಿರಿ ಶಾಪದಿಂದ ಮುಕ್ತರಾಗಲು ಸಾಧ್ಯವಿದೆ ಎಂದು ಉಳ್ಳಾಲ ಉಳಿಯ ಶ್ರೀ ಉಳ್ಳಾಲ್ತಿ ಧರ್ಮರಸರ ಕ್ಷೇತ್ರದ ಆಡಳಿತ ಧರ್ಮದರ್ಶಿ ದೇವು ಮೂಲ್ಯಣ್ಣ ಹೇಳಿದ್ದಾರೆ.  ಬಂಟ್ಚಾಳ ಗಾಣಿಗರ ಸೇವಾ ಸಂಘದ ವತಿಯಿಂದ ಪಾಣೆಮಂಗಳೂರು ಸುಮಂಗಲಾ ಸಭಾಂಗಣದಲ್ಲಿ ಭಾನುವಾರ ಸಂಜೆ  ಆಯೋಜಿಸಲಾದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.            

 ಇದೇ ವೇಳೆ ವಲಯ ಸಮಿತಿ ಪದಾಧಿಕಾರಿಗಳಿಗೆ ಸಾಂಕೇತಿಕವಾಗಿ 'ಕಾಣಿಕೆ ಹುಂಡಿ' ವಿತರಿಸಿದರು. ಸಂಘದ ಅಧ್ಯಕ್ಷ ಬಿ.ರಘು ಸಪಲ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತೀ ಗ್ರಾಮ ಮಟ್ಟದಲ್ಲಿ ಧಾರ್ಮಿಕ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.    ಸಂಘದ ಜಿಲ್ಲಾಧ್ಯಕ್ಷ ತಾರನಾಥ ಸುವರ್ಣ ಮಾತನಾಡಿ, ಜಿಲ್ಲಾ ಸಂಘವು ಶತಮಾನೋತ್ಸವ ಸಂಭ್ರಮದಲ್ಲಿದ್ದು, ಪ್ರತೀ ತಾಲೂಕು ಮಟ್ಟದಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಡೆಸಲು ಚಿಂತನೆ ನಡೆಸಿದೆ ಎಂದು ತಿಳಿಸಿದರು.             ಸಂಘದ ಉಪಾಧ್ಯಕ್ಷ ತಿಮ್ಮಪ್ಪ ಸಪಲ್ಯ ಇಡ್ಕಿದು, ಕಾರ್ಯದರ್ಶಿ  ದಿನೇಶ ಬೋಳಂತೂರು, ಮಂಗಳೂರು ಕರಾವಳಿ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ವೆಂಕಟೇಶ್ ಮತ್ತಿತರರು ಇದ್ದರು. ಸಂಘದ ಉಪಾಧ್ಯಕ್ಷ ನಾಗೇಶ ಕಲ್ಲಡ್ಕ ಸ್ವಾಗತಿಸಿ, ಹರೀಶ ಕುತ್ತಾರು ಪ್ರಾಸ್ತಾವಿಕ ಮಾತನಾಡಿದರು. ಬಾಲಕೃಷ್ಣ ಸೆರ್ಕಳ ವಂದಿಸಿದರು. ನಾಗೇಶ ಪಾಣೆಮಂಗಳೂರು ಕಾರ್ಯಕ್ರಮ ನಿರೂಪಿಸಿದರು.