ಮಂಗಳೂರು: ಕರ್ನಾಟಕ ರಾಜ್ಯ ಪೋಲೀಸ್ ಮೀಸಲು ಪಡೆ, ಮಂಗಳೂರು ಇವರು ಆಯೋಜಿಸಿದ್ದ ಸಿಬ್ಬಂದಿ ತರಬೇತಿ ಕಾರ್ಯಕ್ರಮದಲ್ಲಿ ಮೀನುಗಾರಿಕೆ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಶಿವಕುಮಾರ್ ಮಗದ ಮಾತನಾಡುತ್ತಾ ಖಾಕಿಯು ದರ್ಪದ ಸಂಕೇತವಾಗಿರದೆ, ರಕ್ಷಣೆಯ ಸಂಕೇತವಾಗಿರಬೇಕಾದರೆ ಪೋಲಿಸರು ಸಂತೋಷವಾಗಿರುವುದನ್ನು ಕಲಿತುಕೊಳ್ಳಬೇಕು ಎಂದರು. ಸಮಾಜದಲ್ಲಿ ಪ್ರಜ್ಞಾವಂತಿಕೆ ಬೆಳೆದಷ್ಟು ಸಾಮಾಜಿಕ ಸಮಸ್ಯೆಗಳು ಕಡಿಮೆಯಾಗಬೇಕಿತ್ತು. ಆದರೆ, ಸಮಸ್ಯೆಗಳು ಜಾಸ್ತಿಯಾಗುತ್ತಿವೆ. ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ಶಾಂತಿ ಕಾಪಾಡುವ ಗುರುತರ ಜವಬ್ದಾರಿ ಪೋಲೀಸ್ ಇಲಾಖೆಯ ಸಿಬ್ಬಂದಿಯ ಮೇಲಿರುತ್ತದೆ. ಆದರೆ ಪೋಲಿಸರ ಕೆಲಸದ ಒತ್ತಡ, ವಯಕ್ತಿಕ ಸಮಸ್ಯೆ, ಮೇಲಧಿಕಾರಿಗಳ ಮತ್ತು ವ್ಯೆವಸ್ಥೆಯ ಒತ್ತಡಗಳು ಅವರನ್ನು ಮತ್ತಷ್ಟು ಖಿನ್ನತೆಗೆ ದೂಡುವ ಸಾಧ್ಯತೆಗಳೇ ಹೆಚ್ಚು. ಅದು ಅವರ ಕುಟುಂಬದ ಮೇಲೂ ಖುಣಾತ್ಮಕ ಪರಿಣಾಮ ಬೀರುತ್ತದೆ. ಆದ್ದರಿಂದ, ತಮ್ಮ ಒತ್ತಡ ನಿವಾರಿಸಿಕೊಳ್ಳಲು ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ಯೋಗ, ಸಂಗೀತ, ಕ್ರೀಡೆ ಹೀಗೆ ಯಾವುದಾದರೊಂದು ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಂಡು ಮಾನಸಿಕ ಆರೋಗ್ಯವನ್ನು ತಾವೇ ಉತ್ತಮ ಸ್ಥಿತಿಯಲ್ಲಿಟ್ಟುಕೊಳ್ಳಬೇಕು. ತಮ್ಮ ಆರ್ಥಿಕ ಸ್ಥಿತಿಯನ್ನು ಉತ್ತಮ ಪಡಿಸಿಕೊಳ್ಳಲು ತಾವೇ ಸ್ವಸಹಾಯ ಸಂಘ ಮಾಡಿಕೊಂಡು ಬಡ್ಡಿ, ಚಕ್ರಬಡ್ಡಿಯ ವ್ಯೆವಸ್ಥೆಗೆ ಬಲಿಯಾಗಬಾರದೆಂದು ಕೆಳ ಹಂತದ ನೌಕರರಿಗೆ ತಿಳಿಸಿದರು. ಡಾ. ಮಗದ ಅವರು ಈಗಾಗಲೇ ದಕ್ಷಿಣ ಕನ್ನಡ ಪೋಲಿಸ್ ವರಿಷ್ಟಾಧಿಕಾರಿಯವರ ನೇತೃತ್ವದಲ್ಲಿ ನಗರದಲ್ಲಿ ನಡೆದ ಇಂತಹದೇ ಕಾರ್ಯಕ್ರಮದಲ್ಲಿ 300 ಕ್ಕೂ ಹೆಚ್ಚು ಪೋಲೀಸ್ ಸಿಬ್ಬಂದಿಗೆ ತರಬೇತಿ ನೀಡಿದ್ದಾರೆ.

ಪೋಲೀಸ್ ಇಲಾಖೆಗೆ ಸೇವೆಗೆಂದು ಬರುವ ಸಾರ್ವಜನಿಕರಿಗೆ ಪ್ರೀತಿಯಿಂದ ಮಾತನಾಡಿಸುವ ಪರಿಪಾಟ ಬೆಳೆಸಿಕೊಂಡು ಸಾರ್ವಜನಿಕರಲ್ಲಿ ಇಲಾಖೆಯ ಬಗ್ಗೆ ವಿಶ್ವಾಸಾರ್ಹತೆ ಗಳಿಸಿಕೊಂಡು ಕಾರ್ಯನಿರ್ವಹಿಸಿದರೆ, ಯಾವ ಹುದ್ದೆಯಲ್ಲಿದ್ದರೂ ಸಂತೃಪ್ತ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದರು. ಡಿಎಸ್ಪಿಗಳಾದ ಮಹದೇವಸ್ವಾಮಿ, ಶರತ್, ಹೇಮಕುಮಾರ್, ಇನ್‍ಸ್ಪೆಕ್ಟರ್ ಅವಿನಾಶ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ಮೀಸಲು ಪೋಲೀಸ್ ಪಡೆಯ ಅಧಿಕಾರಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಡಾ. ಮಗದ ಅವರನ್ನು ಸನ್ಮಾನಿಸಲಾಯಿತು.