ಬಂಟ್ವಾಳ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಸಂಪೂರ್ಣವಾಗಿ ನಿರಾಶಾದಾಯಕವಾಗಿದೆ. ಉದ್ಯೋಗ ಸೃಷ್ಟಿ, ಆರ್ಥಿಕ ಚೇತರಿಕೆಗೆ ಪೂರಕವಾದ ಯಾವುದೇ ಕ್ರಮಗಳು ಬಜೆಟ್ ನಲ್ಲಿ ಇಲ್ಲ. ಜನರನ್ನು ದಿಕ್ಕು ತಪ್ಪಿಸುವ ತೋರಿಕೆಯ ಘೋಷಣೆಗಳಷ್ಟೇ ಬಜೆಟ್ ನಲ್ಲಿವೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಹಿಂದಿನ ಎಲ್ಲ ಬಜೆಟ್ ಗಳಲ್ಲೂ ಸಾರ್ವಜನಿಕ ಉದ್ದಿಮೆಗಳ ಷೇರು ವಿಕ್ರಯ ಮಾಡಿದ್ದ ಬಿಜೆಪಿ ಸರಕಾರ, ಈ ಬಾರಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ದೇಶದ ಜನರ ಜೀವನದಲ್ಲಿ ಹಾಸುಹೊಕ್ಕಾಗಿರುವ ಜೀವ ವಿಮಾ ನಿಗಮದ ಷೇರುಗಳನ್ನು ಮಾರಾಟ ಮಾಡುವ ಘೋಷಣೆ ಮಾಡಿದೆ. ಇದು ಆರ್ಥಿಕ ಕುಸಿತದಿಂದ ಕಂಗೆಟ್ಟಿರುವ ದೇಶಕ್ಕೆ ನೀಡಿರುವ ಮತ್ತೊಂದು ಬಲವಾದ ಹೊಡೆತ. ಇಂತಹ ಘೋಷಣೆಯಿಂದ ಕೇಂದ್ರ ಸರಕಾರ ಆರ್ಥಿಕ ವಲಯದಲ್ಲಿ ಮತ್ತಷ್ಟು ಅಭದ್ರತೆ ಸೃಷ್ಟಿಸಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ತೆರಿಗೆ ಸರಳೀಕರಣದ ಕ್ರಮಗಳಿಂದಲೂ ಜನರಿಗೆ ಯಾವುದೇ ಅನುಕೂಲ ಇಲ್ಲ. ತೆರಿಗೆ ಪ್ರಮಾಣ ಕಡಿತ ಮಾಡಿರುವುದು ಘೋಷಣೆಗೆ ಸೀಮಿತವಾಗಿದೆ. 70ಕ್ಕೂ ಹೆಚ್ಚು ವಿನಾಯಿತಿಗಳನ್ನು ರದ್ದು ಮಾಡಲಾಗಿದೆ. ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಿತ್ತುಕೊಳ್ಳುವ ಕೆಲಸ ಇದು ಎಂದು ಅವರು ತಿಳಿಸಿದ್ದಾರೆ.
ಕರಾವಳಿಗೆ ನಿರಾಸೆ
ಈ ಬಾರಿಯ ಬಜೆಟ್‌ನಲ್ಲಿ ಕರಾವಳಿ ಜನರಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ದೊಡ್ಡ ಕೊಡುಗೆಗಳನ್ನು ನೀಡಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಈ ಬಜೆಟ್ ನಿಂದ ಇಲ್ಲಿನ ಜನರಿಗೆ ನಿರಾಸೆಯಾಗಿದೆ. ಮತ್ಸ್ಯೋದಮವನ್ನು ಉತ್ತೇಜಿಸಲು ನೀಲಿ ಆರ್ಥಿಕತೆ ಯೋಜನೆ ಜಾರಿ ಮಾಡಲಾಗುವುದು ಎಂಬ ಘೋಷಣೆ ಬಜೆಟ್‌ನಲ್ಲಿ ಇದೆ. ಮೀನಿನ ಉತ್ಪಾದನೆ ಮತ್ತು ರಫ್ತು ಹೆಚ್ಚಿಸುವ ಗುರಿಗಳಷ್ಟೇ ಇವೆ. ನಿಗದಿತವಾದ ಅನುದಾನವನ್ನೇ ಒದಗಿಸಿಲ್ಲ. ಇದು ದೇಶದ ಕರಾವಳಿ ಪ್ರದೇಶಗಳ ಜನರ ಕಣ್ಣೊರೆಸುವ ತಂತ್ರವಾಗಿದೆ ಎಂದು ದ.ಕ. ಮಾಜಿ ಉಸ್ತುವಾರಿ ಬಿ.ರಮಾನಾಥ ರೈ ಹೇಳಿದ್ದಾರೆ.