ಬಂಟ್ವಾಳ: ಲೋಕಸಭಾ ಚುನಾವಣೆಯ ಬಳಿಕ ಬಡಕಬೈಲಿನಲ್ಲಿ ನಡೆದ ಬಿಜೆಪಿ ವಿಜಯೋತ್ಸವದ ಸಂದರ್ಭ ಮತೀಯವಾದಿ ಸಂಘಟನೆಗಳ ಕಾರ್ಯಕರ್ತರು ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ ಕೊಲೆ ಬೆದರಿಕೆ ಒಡ್ಡಿರುವುದು ಖಂಡನಾರ್ಹ. ಪ್ರಕರಣವನ್ನು ಭೇದಿಸಿದ ಪೋಲೀಸರ ಕಾರ್ಯ ಶ್ಲಾಘನೀಯ. ಆದರೆ ಬಿಜೆಪಿಯ ಜನಪ್ರತಿನಿಧಿಗಳು ಹಾಗೂ ನಾಯಕರು ಪೋಲೀಸರ ಮೇಲೆ ಒತ್ತಡ ಹೇರಿ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಆರೋಪಿಸಿದ್ದಾರೆ.
ಬಿ.ಸಿ.ರೋಡಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಈಗಾಗಲೇ ಪೋಲೀಸರು ಬಂಧಿಸುವ ಮೂಲಕ ಉತ್ತಮ ಕಾರ್ಯ ಮಾಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಯಾವುದೇ ರೀತಿಯ ಪ್ರಭಾವ ಅಥವಾ ಒತ್ರಡಕ್ಕೆ ಒಳಗಾಗದೆ ಪ್ರಕರಣದ ತನಿಖೆಯನ್ನು ನಡೆಸಬೇಕು ಎಂದು ಒತ್ತಾಯಿಸಿದರು.
ಆರೋಪಿಗಳ ಪೈಕಿ ಗಾಗಲೇ ಕೊಲೆ ಪ್ರಕರಣವೊಂದರ ಪ್ರಮುಖ ಆರೋಪಿಯಾಗಿದ್ದು ಈ ವಿಷಯವನ್ನೂ ಪೋಲೀಸರು ಗಂಭೀರವಾಗಿ ಪರಿಗಣಿಸಬೇಕು.ಮನೆಯಂಗಳಕ್ಕೆ ಪ್ರವೇಶಗೈದು ಅವಾಚ್ಯ ಶಬ್ಧಗಳಿಂದ ನಿಂದಿಸಿ ಕೊಲೆ ಬೆದರಿಕೆ ಒಡ್ಡಿರುವ ಬಗ್ಗೆಯೂ ಸೂಕ್ತ ತನಿಖೆ ನಡೆಯಬೇಕು ಎಂದು ರೈ ಹೇಳಿದರು.
ರಮಾನಾಥ ರೈ ಅವರ ಕಾಲದಲ್ಲಿ ಜಾಸ್ತಿ ಗಲಭೆ ನಡೆಯುತ್ತಿತ್ತು ಎಂದು ಕೆಲವರು ಆರೋಪಿಸುತ್ತಿದ್ದಾರೆ. ಆದರೆ ಆಗ ಗಲಭೆ ಸೃಷ್ಠಿಸುತ್ತಿದ್ದವರು ಯಾರು ಎಂಬುದನ್ನು ಅವರೇ ಪ್ರಶ್ನಿಸಿಕೊಳ್ಳಬೇಕು. ಜಲೀಲ್ ಕರೋಪಾಡಿ, ಹರೀಶ್ ಪೂಜಾರಿ, ಶರತ್ ಮಡಿವಾಳ, ಅಶ್ರಫ್, ನಝೀರ್ ಮೊದಲಾದವರ ಕೊಲೆ ಪ್ರಕರಣದ ಆರೋಪಿಗಳು ಯಾರು? ಹಲವಾರು ಕಡೆಗಳಲ್ಲಿ ಗಲಭೆ ಸೃಷ್ಠಿಸಿ ಅಶಾಂತಿಯ ವಾತಾವರಣ ನಿರ್ಮಿಸಿದವರು ಯಾರು ಎನ್ನುವುದು ಪ್ರಜ್ಞಾವಂತ ನಾಗರಿಕರಿಗೆ ಗೊತ್ತಿದೆ ಎಂದರು.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿದ್ದರು.