ಬಂಟ್ವಾಳ : ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಬಡಕಬೈಲ್ ಎಂಬಲ್ಲಿ ಬಿ.ಜೆ.ಪಿಯ ಚುನಾವಣಾ ವಿಜಯೋತ್ಸವ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಸಂದರ್ಭ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಮಿಥುನ್ ರೈ ವಿರುದ್ಧ ಅವಾಚ್ಯವಾಗಿ ನಿಂದಿಸಿ ಹಾಗೂ ಜೀವ ಬೆದರಿಕೆ ಒಡ್ಡಿದ್ದ ಪ್ರಕರಣವನ್ನು ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿಯು ತೀವ್ರವಾಗಿ ಖಂಡಿಸಿದೆ.
ಪಾನಮತ್ತರಾಗಿದ್ದ ಬಿ.ಜೆ.ಪಿ ಕಾರ್ಯಕರ್ತರ ಈ ಕೃತ್ಯವು ಆ ಪಕ್ಷಕ್ಕೆ ಶೋಭೆ ತರುವಂತಹದಲ್ಲ. ಈ ಬಗ್ಗೆ ಈಗಾಗಲೇ ಪ್ರಕರಣ ದಾಖಲಾಗಿದ್ದು 6 ಮಂದಿಗೆ ನ್ಯಾಯಾಂಗ ಬಂಧನವಾಗಿದೆ. ಕೃತ್ಯದ ಬಗ್ಗೆ ಬಿ.ಜೆ.ಪಿಯ ಯಾವ ನಾಯಕರುಗಳು ತುಟಿ ಬಿಚ್ಚುತ್ತಿಲ್ಲ. ಕೈ, ಕಾಲು, ತಲೆ ಕಡಿಯುತ್ತೇನೆಂದು ಬಹಿರಂಗವಾಗಿ ಘೋಷಿಸುವ ಈ ಸಮಾಜಘಾತುಕರನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಕೆಲಸವನ್ನು ಬಿ.ಜೆ.ಪಿಯವರು ಮಾಡಬೇಕಾಗಿದೆ.
ಈ ರೀತಿಯ ದ್ವೇಷ ರಾಜಕಾರಣವನ್ನು ಬಿ.ಜೆ.ಪಿಯು ಮುಂದುವರೆಸಿದರೆ ಕಾಂಗ್ರೆಸ್ ಪಕ್ಷವು ಕೈ ಕಟ್ಟಿ ಕುಳಿತುಕೊಳ್ಳುವುದಿಲ್ಲ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬೀದಿಗಿಳಿದು ಹೋರಾಟ ಮಾಡಲು ಹಿಂಜರಿಯುವುದಿಲ್ಲ ಎಂದು ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಕೆ.ಹರೀಶ್ ಕುಮಾರ್‍ರವರು ತಿಳಿಸಿರುತ್ತಾರೆ.