ಪ್ರಪಂಚದಾದ್ಯಂತ ಕೊರೊನಾದ ಅಟ್ಟಹಾಸ ಮೆರೆದಾಡುತ್ತಿರುವ ಈ ಸಮಯದಲ್ಲಿ ಆನ್‍ಲೈನ್ ಶಿಕ್ಷಣದ ಬಗೆಗೆ ಬಹಳಷ್ಟು ಚರ್ಚೆ ಮುನ್ನೆಲೆಗೆ ಬರುತ್ತಿದೆ. ಶಿಕ್ಷಣ ತಜ್ಞರುಗಳು, ಡಾಕ್ಟರರುಗಳು, ವಿರೋಧಿಸಿದ್ದರೂ ಕೂಡಾ ಸಾರ್ವಜನಿಕರ, ಹೆತ್ತವರ  ಒತ್ತಾಸೆಗೆ ಬಿದ್ದರಾಜ್ಯ ಸರಕಾರ ಸೂಕ್ತ ವೇಳೆಯ ನಿಗದಿಯೊಂದಿಗೆ ತನ್ನ ಒಪ್ಪಿಗೆಯನ್ನು ನೀಡಿದೆ. ಸುಪ್ರೀಂಕೋರ್ಟ ಕೂಡಾ ಅವಕಾಶವನ್ನು ಒದಗಿಸಿದೆ.ಅಷ್ಟಾದರೂ ಸಹ ಬರವಣಿಗೆಯ ದೃಷ್ಟಿಯಿಂದ ಆನ್‍ಲೈನ್ ಶಿಕ್ಷಣ ಸಮರ್ಪಕ ಎಂದೆಣಿಸುವುದಿಲ್ಲ ಎಂದು ಎಲ್ಲರೂ ಸಾರಿದ್ದಾರೆ.

ಬರಹ ಕೌಶಲ: ನಿಜ, ಶಿಕ್ಷಣ ಕಲಿಕೆಯ ಪ್ರಾಥಮಿಕಆದ್ಯತೆಯತೇ ಬರವಣಿಗೆ.ಮಗು ಎಲ್ಲವನ್ನೂ ತಿಳಿದು ಅರ್ಥಮಾಡಿಕೊಳ್ಳುವ ಪ್ರಾಯಕ್ಕೆ ಬಂದಾಗ ಹೆತ್ತವರು ಅಕ್ಷರಾಭ್ಯಾಸಕ್ಕೆ ಪ್ರಾರಂಭಿಸುತ್ತಾರೆ.ಅಕ್ಷರಾಭ್ಯಾಸದೊಂದಿಗೆ ಬರವಣಿಗೆಯ ಪ್ರಾಥಮಿಕ ಶಿಕ್ಷಣ ಪ್ರಾರಂಭವಾಗುತ್ತದೆ.ಮನೆಯಲ್ಲಿ ತಂದೆ, ತಾಯಿ ಅಥವಾ ಹಿರಿಯರು ಮಗುವಿನ ಕೈ ಬೆರಳನ್ನು ಹಿಡಿದು ಅಕ್ಷರವನ್ನು ತಿದ್ದಿಸುತ್ತಾ ಹೇಳಿ, ಹೇಳಿ ಉರುಹೊಡೆಸಿ, ಸರಿಪಡಿಸುವ ಕೆಲಸವನ್ನು ಮಾಡುತ್ತಾರೆ.ಅಂಗನವಾಡಿ ಅಥವಾ ಬಾಲವಾಡಿ ಅಥವಾ ಕೆ.ಜಿ.ತರಗತಿಗಳಲ್ಲಿ ಶಿಕ್ಷಕರು, ಆ ಕೆಲಸವನ್ನು ಮಾಡಿ ಬರವಣಿಗೆಯನ್ನು ಸಾಕಷ್ಟು ಸುಧಾರಿಸಲು, ಅಂದಗೊಳಿಸಲು ಬಹಳಷ್ಟು ಪ್ರಯತ್ನಿಸುತ್ತಾರೆ.

ಅಕ್ಷರಾಭ್ಯಾಸ ಅಥವಾ ಬರಹವನ್ನು ಬರೆಸುವಾಗ ಮಗುವಿನ ಕಣ್ಣು, ಕಿವಿ, ಚರ್ಮ, ಮಿದುಳು, ಕೈ, ಇಂದ್ರಿಯಗಳೆಲ್ಲವೂ ಕೆಲಸ ಮಾಡಿ ನೆನಪಿನ ಶಕ್ತಿ ವೃದ್ಧಿಸುವ ಕೆಲಸವನ್ನು ಮಾಡುತ್ತದೆ.ಇಂತಹ ಏಕಾಗ್ರತೆಯ ಕಾರ್ಯದಿಂದಾಗಿ ಮಗು ಸದಾ ಜಾಗರೂಕವಾಗಿದ್ದು ಅಕ್ಷರವನ್ನುತಿದ್ದಿ, ತಿದ್ದಿ ಬರಹ ಕೌಶಲವನ್ನು ವೃದ್ಧಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತದೆ.ಶಾಲೆಗೆ ಹೋಗುವವರಿಗೆ ಅಕ್ಷರ ತಿದ್ದುವಿಕೆ ಹೋಂ ವರ್ಕ್‍ನಂತೆ ಸರಿಪಡಿಸಿಕೊಳ್ಳುವ ಅತ್ಯತ್ತಮ ಸಂದರ್ಭವನ್ನುಒದಗಿಸುತ್ತದೆ.

ಸೋಮಾರಿತನ : ಬರಹರಹಿತ ಶಿಕ್ಷಣ ಎಂದಿಗೂ ಸೋಮಾರಿತನಕ್ಕೆ ಪ್ರೇರಕ. ಬರಹ ಅಥವಾ ಅಕ್ಷರಾಭ್ಯಾಸ ಏಕಾಗ್ರತೆಯನ್ನು ಬಯಸುವ ಪ್ರಕ್ರಿಯೆಯಾಗಿದ್ದು ಭಾಷಾಕಲಿಕೆಯಲ್ಲಿ ಪ್ರಧಾನ ಪಾತ್ರವನ್ನು ವಹಿಸುತ್ತದೆ.ವ್ಯಾಕರಣರಹಿತ ಭಾಷಾಜ್ಞಾನ ಎಂದೆಂದಿಗೂ ಸಮರ್ಪಕ ಎನಿಸಲಾರದು. ಹೀಗಾಗಿ ವ್ಯಾಕರಣ ಪ್ರಾರಂಭಗೊಳ್ಳುವುದೇ ಅಕ್ಷರಾಭ್ಯಾಸದಿಂದ ಅಕ್ಷರಗಳನ್ನು ಜೋಡಿಸುತ್ತಾ ಅರ್ಥವತ್ತಾದ ಶಬ್ದಗಳನ್ನೂ, ಅರ್ಥವತ್ತಾದ ಶಬ್ದಗಳಿಂದ ಅರ್ಥವತ್ತಾದ ವಾಕ್ಯವನ್ನೂ ರಚಿಸಲಾಗುತ್ತದೆ.ಮಗು ಅಕ್ಷರಾಭ್ಯಾಸವನ್ನೇ ಮಾಡದಿದ್ದರೆಯೋಗ್ಯ ಶಬ್ದ, ಯುಕ್ತ ವಾಕ್ಯರಚನೆಯಾಗಲೀ ತಿಳಿಯಲು ಸಾಧ್ಯವೇ? ಬಾಯಿ ಮಾತಿನಿಂದ ಕೇವಲ ಮಾತನಾಡುವ ಭಾಷೆಯನ್ನು ಕಲಿಯಬಹುದೇ ಹೊರತು ಬರವಣಿಗೆ ಅಸಾಧ್ಯ.ಬರವಣಿಗೆಯ ಪ್ರಯತ್ನವಿಲ್ಲದೆ ಬರೆದುಕಲಿತು, ಓದಲೂ ಸಾಧ್ಯವಾಗಲಾರದು. ಪ್ರಾಥಮಿಕ ಶಿಕ್ಷಣದ ಬರೆದು, ಓದಿ, ಕಲಿಯುವ ಪ್ರಕ್ರಿಯೆ ಆನ್‍ಲೈನ್ ಶಿಕ್ಷಣದಲ್ಲಿ ಇಲ್ಲವೇ ಇಲ್ಲಎಂದು ಹೇಳಬಹುದು.ಅಥವಾ ಇದ್ದರೂ ಮನೆಯವರ, ಹೆತ್ತವರ, ಶಿಕ್ಷಕರ ತಪ್ಪನ್ನುತಿದ್ದುವ, ಸರಿಪಡಿಸುವ ಮುತುವರ್ಜಿ ಇಲ್ಲದಿದ್ದರೆ ದುಸ್ತರವೇ ಸರಿ ಅಥವಾ ಇಲ್ಲವೆಂದೇ ಹೇಳಬಹುದು.ಒಂದು ವೇಳೆ ತಿದ್ದಿ ಸರಿಪಡಿಸುವಿಕೆ ನಡೆದರೂ  ವಾರ/ಎರಡು ವಾರ/ತಿಂಗಳೊಂದಾವರ್ತಿ ಮಾತ್ರ.

ಶಾಲಾ ಚಟುವಟಿಕೆಗೆ ಪೂರಕ ಮಾತ್ರ: ಅಕ್ಷರಾಭ್ಯಾಸ/ಬರವಣಿಗೆಯ ಪೂರ್ಣ ಪರಿಚಯ ಹೊಂದಿರುವ, ಶಬ್ದ, ವಾಕ್ಯಗಳ ಬಗೆಗೆ ಸಂಪೂರ್ಣಜ್ಞಾನ ಹೊಂದಿದ ಮನುಷ್ಯ ಮಾತ್ರ ಆನ್‍ಲೈನ್ ಶಿಕ್ಷಣದಿಂದ ಪ್ರಯೋಜನ ಹೊಂದಲು ಸಾಧ್ಯ. ಏಕೆಂದರೆ ಅದಾಗಲೇಆತನಿಗೆಎಲ್ಲಾ ಪ್ರಾಥಮಿಕ ಜ್ಞಾನವೂ ದೊರಕಿರುವದರಿಂದ ಉನ್ನತ ಶಿಕ್ಷಣಕ್ಕೆ ಪೂರಕವಾಗಿ ಆನ್‍ಲೈನ್ ಶಿಕ್ಷಣ ಹೆಚ್ಚಿನ ಬೆಂಬಲ ಒದಗಿಸಲಿದೆ. ಪ್ರಾಥಮಿಕ ಶಾಲಾ ಚಟುವಟಿಕೆಗಳಾದ ಕೈ ಹಿಡಿದು  ಅಕ್ಷರಾಭ್ಯಾಸ, ಶಬ್ದ, ವಾಕ್ಯಗಳ ಪ್ರಯೋಗ ಕಲಿಯುವುದೇ ಮೂಲ, ಪ್ರಧಾನ ಶಿಕ್ಷಣದ ಹಂತ.ಹೀಗೆಂದ ಮಾತ್ರಕ್ಕೆ ನಾನೇನೂ ಆನ್ ಲೈನ್ ವಿರೋಧಿಅಲ್ಲ. ಶಿಕ್ಷಣದ ಪ್ರಾಥಮಿಕಜ್ಞಾನವಾದ ಬರವಣಿಗೆ/ ಅಕ್ಷರಾಭ್ಯಾಸ ಅನ್‍ಲೈನ್ ನಲ್ಲಿ ಅಸಾಧ್ಯವಾದುದರಿಂದ ಪ್ರಾಥಮಿಕ ಶಿಕ್ಷಣಕ್ಕೆ ಇದು ಪೂರಕವಲ್ಲ ಎಂದೆ.ಆದರೆ ಪ್ರೌಢ ಶಿಕ್ಷಣಕ್ಕೆ ಇದು ಹೆಚ್ಚು ಪೂರಕ, ಪ್ರೇರಕ, ಉಪಯೋಗಕರ. ಒಂದು ವೇಳೆ ಮನೆಯಲ್ಲಿರುವ ಹೆತ್ತವರು, ಹಿರಿಯರು ಮುತುವರ್ಜಿ ವಹಿಸಿ ಅಕ್ಷರಾಭ್ಯಾಸ, ಬರವಣಿಗೆ, ಶಬ್ದ, ವಾಕ್ಯಗಳ ಜ್ಜಾನವನ್ನು ಮಕ್ಕಳಿಗೆ ಕೊಟ್ಟಲ್ಲಿ ತದನಂತರದಲ್ಲಿ ಮಾತ್ರ ಆನ್ ಲೈನ್ ಶಿಕ್ಷಣ ಪ್ರಭಾವಶಾಲಿ, ಪೂರಕ.

ರಾಯೀ ರಾಜಕುಮಾರ, 
ಮೂಡುಬಿದಿರೆ, ಹಿರಿಯ ಶಿಕ್ಷಕರು.