ನೆಸ್ಲೀನ್…ಈ ಹೆಸರು ಕೇವಲ ಹೆಸರಾಗಿ ಉಳಿದಿಲ್ಲ. ನನ್ನ ಜೀವನದ ನೆನಪಿನ ಬುತ್ತಿಯಲ್ಲಿ ಅಚ್ಚಳಿಯದಂತೆ ಉಳಿದಿರುವ ಏಕೈಕ ಹೆಸರಿದು. ಅಪರಿಚಿತಳಾಗಿ ಪರಿಚಯವಾಗಿ, ಚಿರಪರಿಚಿತಳಾಗಿರುವವಳು ಈಕೆ. ಕಾಲೇಜಿನಿಂದ ಮನೆಗೆ ವಾಪಸ್ಸಾಗುವ ದಾರಿಯಲ್ಲಿ ಶುರುವಾದ ಗೆಳೆತನ ನಮ್ಮದು. ಈ ಗೆಳೆತನ ಇಂದು ನಮ್ಮ ಊಹೆಗಳನ್ನೇ ಮೀರಿ ನಮ್ಮ ಜೀವನದ ಬಹುಮುಖ್ಯ ಭಾಗವಾಗಿ ಬೆಳೆದು ನಿಂತಿದೆ.
ಅದೊಂದು ದಿನ ನಾನು ಅನಾರೋಗ್ಯ ನಿಮಿತ್ತ ಆಸ್ಪತ್ರೆಯಲ್ಲಿದ್ದೆ. ನನ್ನ ಅಮ್ಮನ ಮೂಲಕ ಈ ವಿಷಯವನ್ನರಿತ ಈಕೆ ಆ ಕ್ಷಣದಲ್ಲೇ ನನ್ನ ಬಳಿ ಓಡೋಡಿ ಬಂದಳು. ಅವಳ ಕಣ್ಣುಗಳಲ್ಲಿ ಪ್ರೀತಿ, ಭಯ, ನೋವು ಎಲ್ಲವೂ ಮನೆ ಮಾಡಿತ್ತು. ಅಮ್ಮನಂತೆ ಕೈ ತುತ್ತು ನೀಡಿ ಆರೈಕೆ ಮಾಡಿದಳು. ಆಗ ಅವಳಲ್ಲಿ ನಾನು ತಾಯಿಯ ಪ್ರೀತಿ ಕಂಡೆ. ಜೊತೆಗಿದ್ದವರು, ‘ನಿಮ್ಮ ಸಹೋದರಿಯೇ?’ ಎಂದು ಕೇಳುತ್ತಿದ್ದರು. ನಿಜವಾದ ಸ್ನೇಹಿತೆ ತಾಯಿಯ ಪ್ರೀತಿ ನೀಡಬಲ್ಲಳು ಎಂಬುದನ್ನು ಈಕೆ ನಿರೂಪಿಸಿದಳು.
ಅಖಿಲಾ,
ಪ್ರಥಮ ಬಿಎ,
ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು