ರಕ್ಷಾ ಬಂಧನ ಸಹೋದರ ಸಹೋದರಿಯರು ಮುಂಗೈಗೆ ಪ್ರೀತಿ ಕಾಳಜಿಯ ಭಾವ ತುಂಬಿರುವ ರಾಖಿ ಕಟ್ಟಿ ಸಂಭ್ರಮಿಸುವ ದಿನ. ರಕ್ಷೆ ಎಂಬ ಅಸ್ತ್ರ ಸಹೋದರ ಸಹೋದರಿಯರ ಬಂಧವನ್ನು ಗಟ್ಟಿಮಾಡುತ್ತದೆ.
ರಾಖಿ ಎಂದಾಕ್ಷಣ ಮೊದಲಿಗೆ ನೆನಪಾಗುವುದೇ ಬಾಲ್ಯದ ಸಿಹಿ - ಕಹಿ ನೆನಪುಗಳು. ಶಾಲೆ, ಕಾಲೇಜ್ ಮತ್ತು ಹಾಸ್ಟೆಲ್‌ನಲ್ಲಿ ಅಣ್ಣ - ತಂಗಿಯರೊಂದಿಗೆ ಸಂಭ್ರಮದಿಂದ ಕಳೆಯುವ ಆ ಕ್ಷಣಗಳು... ರಕ್ಷಾಬಂಧನ ಕೇವಲ ಒಡಹುಟ್ಟಿದ ಅಣ್ಣ ತಂಗಿಯರಿಗೆ ಮಾತ್ರ ಸೀಮಿತವಲ್ಲ, ಅಲ್ಲಿ ಅಂತದ್ದೊಂದು ಭಾವನೆಯಿದ್ದರೆ ಸಾಕು...ರಾಖಿ ಜಾತಿ-ಧರ್ಮದ ಬೇಧವನ್ನು ಮರೆಸುತ್ತದೆ. ನಾವೆಲ್ಲರೂ ಒಂದೇ ಎಂಬ ಭಾವನೆ ತುಂಬುತ್ತದೆ.
ಬಾಲ್ಯದಲ್ಲಿ ರಾಖಿಯ ಮಹತ್ವವೇ ತಿಳಿದಿರಲಿಲ್ಲ. ಆದರೂ ರಕ್ಷಾಬಂಧನದ ದಿನ ಬಂತೆಂದರೆ ಬೆಳಗ್ಗೆ ಬೇಗ ಎದ್ದು ಕೈಯಲ್ಲಿ ರಾಕಿ ಹಿಡಿದುಕೊಂಡು ಯಾರು ಕಣ್ಣೆದುರಿಗೆ ಬರುತ್ತಾರೋ ಅವರ ಮುಂಗೈಗೆ ರಕ್ಷೆ ಕಟ್ಟುತ್ತಿದ್ದೆವು! ಅದರಲ್ಲೂ ಒಂದು ರೀತಿಯ ಸಂತೋಷ. ಆ ದಿನ ಎಲ್ಲರ ಕೈಯೂ ಕೇಸರಿಮಯ. ಯಾರ ಕೈಯಲ್ಲಿ ಹೆಚ್ಚು ರಾಖಿ ಎಂದು ಎಣಿಸುವುದೇ ಪ್ರತಿಷ್ಠಯೆ ವಿಷಯ!
ಒಬ್ಬರಿಗೊಬ್ಬರು ರಕ್ಷೆ ಕಟ್ಟುವ ಈ ದಿನ ಸಂಭ್ರಮದ ಕ್ಷಣವಾಗಿಬಿಡುತ್ತದೆ. ಸಾಂಪ್ರದಾಯಿಕವಾಗಿ ರಕ್ಷಾಬಂಧನದ ದಿನದಂದು ಮುಂಜಾನೆ ಬೇಗ ಎದ್ದು, ಸ್ನಾನ ಮಾಡಿ, ಉಪವಾಸವಿದ್ದು ರಾಖಿ ಕಟ್ಟಿ, ಆರತಿ ಮಾಡಿ ಸಹೋದರ-ಸಹೋದರಿಯರು ಉಡುಗೊರೆ ವಿನಿಮಯ ಮಾಡಿಕೊಳ್ಳುವುದು ವಾಡಿಕೆ. ಕಾಲ ಬದಲಾದಂತೆ ರಕ್ಷಾಬಂಧನದ ಆಚರಣೆಯೂ ಬದಲಾಗಿದೆ, ಆದರೆ ಸಂಭ್ರಮಕ್ಕೇನೂ ಬರವಿಲ್ಲ.
ರಚನಾ. ಕೆ.
ಪ್ರಥಮ ಬಿ.ಎ.( ಪತ್ರಿಕೋದ್ಯಮ )
ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು