ರಕ್ಷಾಬಂಧನ ಬಂತೆಂದರೆ ಸಾಕು ಏನೋ ಉತ್ಸಾಹ. ಊರಲ್ಲಿ, ಮನೆಯಲ್ಲಿ, ಮನದಲ್ಲಿ ಹಬ್ಬದ ವಾತಾವರಣ. ತಂಗಿಗೆ ಅಣ್ಣನಿಗೆ ರಕ್ಷೆ ಕಟ್ಟಲು, ಪ್ರತಿಯಾಗಿ ಉಡುಗೊರೆ ಪಡೆಯಲು ಕಾತರ. ರಕ್ಷೆಯನ್ನು ಕಟ್ಟಲು ಮತ್ತು ಕಟ್ಟಿಸಿಕೊಳ್ಳಲು ಅದೆನೋ ಹೆಮ್ಮೆಯ ಅನುಭವ. ರಕ್ಷಾಬಂಧನ ಬ್ರಾತೃತ್ವದ ಸಂಕೇತ.
ಶಾಲಾ ದಿನಗಳಲ್ಲಿ ರಕ್ಷಾಬಂಧನ ಸಮೀಪಿಸುತ್ತಿದ್ದಂತೆ ಶಾಲಾ ಸಮೀಪದ ಅಂಗಡಿಯಲ್ಲಿ ಬಣ್ಣಬಣ್ಣದ ರಕ್ಷೆಗಳು ರಾರಾಜಿಸುತ್ತಿದ್ದವು. ಅದನ್ನು ನೋಡುವುದೇ ಹಬ್ಬ. ಖರೀದಿಸಲು ಎಲ್ಲಿಲ್ಲದ ಉತ್ಸಾಹ. ಹಿಂದಿನ ದಿನವೇ ಯಾರಿಗೆ ರಾಖಿ ಕಟ್ಟಬಹುದು, ಯಾರಿಂದ ಕಟ್ಟಿಸಿಕೊಳ್ಳಬಹುದು ಎಂಬ ಲೆಕ್ಕಾಚಾರ. ಹಬ್ಬದ ದಿನವಂತೂ ಯಾರ ಕೈಯಲ್ಲಿ ಎಷ್ಟು ರಾಖಿ ಎಂದು ಎಣಿಸುವುದೇ ಸಂಭ್ರಮ. ಎಷ್ಟೋ ಸಲ ಸ್ನಾನ ಮಾಡುವಾಗ ರಕ್ಷೆ ಒದ್ದೆಯಾಗುತ್ತದೆ ಎಂದು ಅದು ಬಿಚ್ಚಿಟ್ಟು ಮತ್ತೆ ಅದೇ ಗೆಳೆಯನಿಂದ ಕಟ್ಟಿಸಿಕೊಂಡ ನೆನಪು!
ಇನ್ನು ಈಗಿನ ಕಾಲೇಜ್ ಕತೆ ಹೇಳುವುದೇ ಬೇಡ. ʼಅವಳುʼ ರಾಖಿ ಕಟ್ಟಲು ಬಂದರೆ ʼಇವನುʼ ಓಡುವುದು, ರಾಖಿಯಿಂದ ತಪ್ಪಿಸಿಕೊಳ್ಳದಿರಲು ಕಾಲೇಜ್‌ಗೇ ಚಕ್ಕರ್ ಹಾಕುವುದು ನಡೆಯುತ್ತದೆ. ಇಲ್ಲಿ ರಾಖಿ ಒಂದು ʼಸಂದೇಶ ವಾಹಕʼ ವಾಗಿ ಕೆಲಸ ಮಾಡುತ್ತದೆ! ಇದನ್ನು ನೋಡುವುದೇ ಗಮ್ಮತ್ತು. ಇನ್ನು ರಕ್ಷೆ ಕಟ್ಟಿ ಸುಮ್ಮನೆ ಬಿಡುತ್ತಾರಾ, ಏನಾದರೂ ಕಪ್ಪಕಾಣಿಕೆ ವಸೂಲಿ ಮಾಡದೇ ಬಿಡೋದಿಲ್ಲ. ಕನಿಷ್ಠಪಕ್ಷ ಒಂದು ಮಿಠಾಯಿಯಾದ್ರೂ ಕೊಡಲೇಬೇಕು. ಆ ದಿನ ಯುವಕರ ಜೇಬು ಖಾಲಿ ಖಾಲಿ!
ರಕ್ಷಾಬಂಧನ ಎಂಬ ಆಚರಣೆ ಹೊರನೋಟಕ್ಕೆ ಸರಳವಾಗಿ ಕಂಡರೂ ಅದರ ಹಿನ್ನೆಲೆ ಮತ್ತು ಆಶಯ ಅಮೂಲ್ಯ. ಅಣ್ಣ-ತಂಗಿ ಅಕ್ಕ-ತಮ್ಮ ಗೆಳೆಯ-ಗೆಳತಿಯರ ನಡುವಿನ ಸ್ನೇಹದ ಬಂಧ ಈ ರಕ್ಷೆ. ರಕ್ಷಾಬಂಧನದಿಂದ ಬ್ರಾತೃತ್ವದ ಭಾವನೆ ಬಲವಾಗುವುದರ ಜೊತೆಗೆ, ಸ್ನೇಹ ಇಮ್ಮಡಿಯಾಗುತ್ತದೆ.
ಗಿರೀಶ್, ಪ್ರಥಮ ಬಿಎ,
ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು.