ಮಂಗಳೂರು,(ಮಾರ್ಚ್ 18):-  ಜಿಲ್ಲೆಯನ್ನು ಬಾಲಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಬಾಲ್ಯಾವಸ್ಥೆಯ ಹಾಗೂ ಕಿಶೋರಾವಸ್ಥೆಯ ಮಕ್ಕಳನ್ನು ದುಡಿಮೆಗೆ ಕಳುಹಿಸದಿರುವ ಬಗ್ಗೆ ಹಾಗೂ  ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ)  ಕಾಯ್ದೆ ಬಗ್ಗೆ ಅರಿವು ಮೂಡಿಸುವ ಬೀದಿ ನಾಟಕ ಪ್ರದರ್ಶನಕ್ಕೆ  ಮಾರ್ಚ್ 17 ರಂದು ನಗರದ ಸರ್ವಿಸ್ ಬಸ್ ನಿಲ್ದಾಣದಲ್ಲಿ ಸಹಾಯಕ ಕಾರ್ಮಿಕ ಆಯುಕ್ತ ಕೆ.ಬಿ. ನಾಗರಾಜ್ ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ಅವರು ಮಾತನಾಡಿ ಬಾಲಕಾರ್ಮಿಕ ಪದ್ಧತಿ ಒಂದು ಸಾಮಾಜಿಕ ಪಿಡುಗು ಆಗಿದ್ದು, ಬಾಲ್ಯಾವಸ್ಥೆ ಮತ್ತು ಕಿಶೋರಾವಸ್ಥೆ ಕಾರ್ಮಿಕರ (ನಿಷೇಧ&ನಿಯಂತ್ರಣ)ಕಾಯ್ದೆ-1986 ರನ್ವಯ  14 ವರ್ಷದೊಳಗಿನ ಬಾಲ್ಯಾವಸ್ಥೆ ಕಾರ್ಮಿಕರನ್ನು ಯಾವುದೇ ಸಂಸ್ಥೆಯಲ್ಲಿ  ಕೆಲಸಕ್ಕೆ ನೇಮಿಸಿಕೊಳ್ಳುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿರುತ್ತದೆ ಎಂದರು.

15 ವರ್ಷದಿಂದ 18 ವರ್ಷದೊಳಗಿನ ಕಿಶೋರಾವಸ್ಥೆಯ ಕಾರ್ಮಿಕರನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ದುಡಿಸಿಕೊಳ್ಳುವುದನ್ನು ನಿಷೇಧಿಸಲಾಗಿದೆ ಹಾಗೂ  ಮಾರ್ಚ್ 17 ರಿಂದ 20 ರವರೆಗೆ ಜಿಲ್ಲೆಯಾದ್ಯಂತ ಒಟ್ಟು 16 ಬೀದಿನಾಟಕ ಪ್ರದರ್ಶನಗಳನ್ನು  ಹಮ್ಮಿಕೊಳ್ಳಲಾಗಿದೆ ಎಂದರು.

ಕಾಯ್ದೆಯನ್ನು ಉಲ್ಲಂಘಿಸಿದ ಮಾಲೀಕರಿಗೆ ರೂ. 50,000/-ದವರೆಗೆ ದಂಡ ಹಾಗೂ 2 ವರ್ಷ ಜೈಲು ಶಿಕ್ಷೆಯನ್ನು ನ್ಯಾಯಾಲಯ ವಿಧಿಸಬಹುದಾಗಿದೆ. ತಪ್ಪಿತಸ್ಥ ಮಾಲೀಕರ ಮೇಲೆ ಪೊಲೀಸ್ ಇಲಾಖೆಯಿಂದ ಎಫ್.ಐ.ಆರ್ ನ್ನು ಸಹ ದಾಖಲಿಸಲಾಗುವುದು ಎಂದರು.  

ಕಾರ್ಯಕ್ರಮದಲ್ಲಿ ಕಾರ್ಮಿಕ ಅಧಿಕಾರಿಗಳಾದ ವಿಲ್ಮಾ ಎಲಿಜಬೆತ್ ತಾವ್ರೂ, ಅಮರೇಂದ್ರ, ಶ್ರೀನಿವಾಸ ನಾಯಕ್, ಯೋಜನಾ ನಿರ್ದೇಶಕರು ಹಾಗೂ ಎಲ್ಲಾ ತಾಲೂಕುಗಳ ಹಿರಿಯ ಕಾರ್ಮಿಕ ನಿರೀಕ್ಷಕರು ಉಪಸ್ಥಿತರಿದ್ದರು.