
ಬೆಂಗಳೂರು : ರಾಜ್ಯದಲ್ಲಿ ಮಾರಕ ಕೊರೊನಾ ಸೋಂಕು ದಿನೇ ದಿನೇ ಏರಿಕೆಯಾಗುತ್ತಲೇ ಇದ್ದು, ಜನತೆ ತತ್ತರಿಸಿದ್ದಾರೆ. ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರೂ ಮಾರಣಾಂತಿಕ ಸೋಂಕು ದಿನೇ ದಿನೇ ವ್ಯಾಪಿಸುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ರಾಜ್ಯದ ವಿವಿಧೆಡೆ ಮತ್ತೊಮ್ಮೆ ಲಾಕ್ ಡೌನ್ ಅವಶ್ಯವಿದೆ ಎಂಬ ಒತ್ತಾಯ ಕೇಳಿಬಂದಿದೆ. ಈ ಕುರಿತಂತೆ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಯಲಿದ್ದು, ಸರ್ಕಾರ ಜುಲೈ 4 ರ ಬಳಿಕ ನಿರ್ಧಾರ ಕೈಗೊಳ್ಳಲಿದೆ ಎನ್ನಲಾಗಿದೆ.
ತೀವ್ರ ವಿರೋಧದ ನಡುವೆಯೇ ಇಂದಿನಿಂದ ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ನಡೆಯುತ್ತಿದ್ದು, ಜುಲೈ 4ಕ್ಕೆ ಪರೀಕ್ಷೆಗಳು ಅಂತಿಮಗೊಳ್ಳಲಿದೆ. ಹೀಗಾಗಿ ಪರೀಕ್ಷೆ ಮುಗಿದ ಬಳಿಕವಷ್ಟೇ ಲಾಕ್ ಡೌನ್ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಲಾಗಿದೆ. ಈ ಬಗ್ಗೆ ಈಗಾಗಲೇ ಸಿಎಂ ಯಡಿಯೂರಪ್ಪ ಹಲವಾರು ಸಚಿವರಿಗೆ ಸ್ಪಷ್ಟ ಸಂದೇಶ ನೀಡಿದ್ದು, ಎಸ್ ಎಸ್ ಎಲ್ ಸಿ ಪರೀಕ್ಷೆ ಮುಗಿಯುವವರೆಗೆ ಎಲ್ಲಿಲೂ ಲಾಕ್ ಡೌನ್ ಇಲ್ಲ. ಆ ಬಳಿಕ ನಿರ್ಧಾರ ಕೈಗೊಳ್ಳಲಾಗುತ್ತದೆ. ಇಂದಿನ ಸಚಿವ ಸಂಪುಟ ಸಭೆಯಲ್ಲಿ ಲಾಕ್ ಡೌನ್ ಕುರಿತಂತೆ ಕೇವಲ ಚರ್ಚೆಯಷ್ಟೇ ನಡೆಯಲಿದೆ ಎಂದು ತಿಳಿಸಿದ್ದಾರೆ.