ನವದೆಹಲಿ: ಭಾರತ ಮತ್ತು ಫ್ರಾನ್ಸ್ ನಡುವಿನ ರಕ್ಷಣಾ ಒಪ್ಪಂದದ ಭಾಗವಾಗಿ ದೇಶದ ವಾಯುನೆಲೆಗೆ ಬಲತುಂಬಲು ಮೊದಲ ಹಂತದಲ್ಲಿ 5 ರಫೇಲ್ ಯುದ್ಧ ವಿಮಾನಗಳು ಹರಿಯಾಣದ ಅಂಬಾಲ ವಾಯುನೆಲೆಯಲ್ಲಿ ಯಶಸ್ವಿಯಾಗಿ ಇಳಿಯಲಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂಭ್ರಮದಿಂದ ಬರಮಾಡಿಕೊಳ್ಳಲು ತಯಾರಾಗಿದ್ದಾರೆ.

ಐದು ರಫೇಲ್ ಯುದ್ಧ ವಿಮಾನಗಳಿಗೆ ಎರಡು ಸುಖೋಯ್ ಯುದ್ಧ ವಿಮಾನಗಳು ಬೆಂಗಾವಲಾಗಿವೆ. ಆಗಸ್ಟ್ 15ರ ಬಳಿಕ ರಫೇಲ್ ವಾಯುಸೇನೆಗೆ ಅಧಿಕೃತವಾಗಿ ಸೇರಿಕೊಳ್ಳಲಿವೆ. ರಫೇಲ್ ವಿಮಾನವೂ ಚೀನಾದ ಜೆ-20 ಯುದ್ಧ ವಿಮಾನಗಳಿಗಿಂತ ಬಲಿಷ್ಠವಾಗಿದೆ.

ಸೋಮವಾರ ದಕ್ಷಿಣ ಫ್ರಾನ್ಸ್ನ ಬಾರ್ಬಡೋಕ್ಸ್ನಲ್ಲಿರುವ ಮೇರಿಗ್ನಾಕ್ ವಾಯುನೆಲೆಯಿಂದ ಟೇಕಾಫ್ ಆದ ಐದು ರಫೇಲ್ ಯುದ್ಧ ವಿಮಾನಗಳು ಇನ್ನು ಕೆಲವೇ ಕ್ಷಣಗಳಲ್ಲಿ ಹರಿಯಾಣದ ಅಂಬಾಲ ವಾಯುನೆಲೆಯಲ್ಲಿ ಇಳಿಯಲಿವೆ.

ಭಾರತ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿರುವ ಫ್ರೆಂಚ್ ಡಸಾಲ್ಟ್ ಏವಿಯೇಷನ್ ಒಟ್ಟು 36 ಯುದ್ಧ ವಿಮಾನಗಳನ್ನು ಭಾರತಕ್ಕೆ ಪೂರೈಸಲಿದೆ. ಮೊದಲ ಕಂತಿನಲ್ಲಿ ಐದು ಯುದ್ಧವಿಮಾನಗಳನ್ನು ಹಸ್ತಾಂತರಿಸಿದೆ.

ಈಗಾಗಲೇ ಒಟ್ಟು ಹತ್ತು ಯುದ್ಧ ವಿಮಾನಗಳ ಹಸ್ತಾಂತರ ಕಾರ್ಯಕ್ರಮ ಪೂರ್ಣಗೊಂಡಿದ್ದು, ಐದು ಯುದ್ಧ ವಿಮಾನಗಳು ತರಬೇತಿ ಉದ್ದೇಶಗಳಿಗಾಗಿ ಫ್ರಾನ್ಸ್ನಲ್ಲಿಯೇ ಇರಲಿವೆ. 2021ರ ಕೊನೆಗೆ ಎಲ್ಲ 36 ಯುದ್ಧ ವಿಮಾನಗಳನ್ನು ಹಸ್ತಾಂತರಿಸಲಾಗುವುದು ಎಂದು ಡಸಾಲ್ಟ್ ತಿಳಿಸಿದೆ.