ಮಂಗಳೂರು:
 
ಸಣ್ಣ ಕೈಗಾರಿಕೆಗಳು ಪಡೆಯುವ ಸಾಲದ ಮೇಲಿನ ಬಡ್ಡಿಯ ವಿಳಂಬ ಪಾವತಿಗೆ ಸಂಬಂಧಿಸಿದ ವ್ಯಾಜ್ಯಗಳನ್ನು ಪರಿಹರಿಸಿಕೊಳ್ಳಲು ಸರ್ಕಾರ ಅಧೀನದಲ್ಲಿ ಪಾವತಿ ವಿಳಂಬ ವಿಚಾರಣೆ ಮಂಡಳಿ ಸ್ಥಾಪಿಸುವುದು ಅಗತ್ಯವಾಗಿದೆ ಎಂದು ಕೇಂದ್ರದ ಸೂಕ್ಷ್ಮ ಸಣ್ಣ ಹಾಗೂ ಮಧ್ಯಮ ಕೈಗಾರಿಕಾ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಪಿಯೂಷ್ ಅಗರವಾಲ್ ಸಲಹೆ ನೀಡಿದರು.

ಅವರು ಸೋಮವಾರ    ವಿಳಂಬ ಪಾವತಿ ಹಾಗೂ ಕಾರ್ಮಿಕ ವೇತನ ಕಾಯ್ದೆ-2019ರ ಕುರಿತು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ವತಿಯಿಂದ  ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ನಡೆದ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಾಹಿತಿ ಕೊರತೆಯಿಂದ   ವಿಳಂಬ ಪಾವತಿಗಳಿಗೆ ಸಂಬಂಧಿಸಿದ ಪ್ರಕರಣಗಳು ಹೆಚ್ಚಾಗಿ ನಿಧಾನಗತಿಯಲ್ಲಿ ಸಾಗುತ್ತಿತ್ತು ಹಾಗಾಗಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಪಂಜಾಬ್ ರಾಜ್ಯದಲ್ಲಿ  ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ವ್ಯಾಜ್ಯಗಳ ಇತ್ಯರ್ಥಕ್ಕೆ ನ್ಯಾಯ ಮಂಡಳಿಗಳನ್ನು ಸ್ಥಾಪಿಸಿ ವಿಳಂಬ ಪಾವತಿಯ ಸಮಸ್ಯೆಗಳನ್ನು ಬಗೆಹರಿಸವಲ್ಲಿ ಯಶಸ್ಸು ಕಂಡಿದೆ, ಅದೇ ಮಾದರಿಯಲ್ಲಿ ರಾಜ್ಯದಲ್ಲಿ ಸ್ಥಾಪಿಸಿದರೆ  ಈ ಕ್ಷೇತ್ರದ ಬೆಳವಣಿಗೆ ಸಹಾಯಕಾರಿ ಆಗಲಿದೆ ಎಂದು ಹೇಳಿದರು.

ಈ ಕಾಯ್ದೆಯ ಅನುಷ್ಠಾನಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ನೇಮಿಸಿದ ಯು.ಕೆ. ಸಿನ್ನಾ ಸಮಿತಿಯೂ ಮಾಹಿತಿ ಪೋರ್ಟಲ್ ರಚನೆ, ಜಿಲ್ಲಾ ಮಟ್ಟದ ನ್ಯಾಯ ಮಂಡಳಿ ಸ್ಥಾಪಿನೆಯ ಶಿಫಾರಸುಗಳನ್ನು ಸಲ್ಲಿಸಿದೆ ಎಂದು ಅವರು ತಿಳಿಸಿದರು.

ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ  ಆರ್. ರಾಜು ಮಾತನಾಡಿ, ವಿಳಂಬ ಪಾವತಿ ವ್ಯಾಜ್ಯಗಳ ಪ್ರಕರಣಗಳು ಸಾಕಷ್ಟು ಸಮಯ ಇತ್ಯರ್ಥ ಆಗದೇ ಇರುವುದಕ್ಕೆ ಸಣ್ಣ ಕೈಗಾರಿಕೆಗಳಿಗೆ ಸಮಸ್ಯೆಗಳು ಉಂಟಾಗಿವೆ, ಅದಕ್ಕಾಗಿಯೇ ಎಂಎಸ್‍ಎಂಇ ವಿಳಂಬ ಪಾವತಿ ಕಾಯಿದೆ ಜಾರಿಗೆ ಬಂದಿದೆ. ಕಾಸಿಯಾ ಈ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಹುಬ್ಬಳ್ಳಿ, ಗುಲ್ಬರ್ಗ, ಬೆಳಗಾವಿ, ಸೇರಿದಂತೆ ಹಲವಾರು ಕಡೆಗಳಲ್ಲಿ ಮಾಹಿತಿ ಕಾರ್ಯಕ್ರಮ ಆಯೋಜಿಸಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಉದ್ಯಮಿಗಳ ವಿವಿಧ ಸಮಸ್ಯೆಗಳ ಕುರಿತು ಸಂವಾದದಲ್ಲಿ ಉದ್ಯಮಿಗಳು ಮತ್ತು ಅಧಿಕಾರಿಗಳ ನಡುವೆ ಸಂವಾದ ನಡೆಯಿತು.

ಎಂಎಸ್‍ಐಸಿ ವಲಯ ಮುಖ್ಯ ವ್ಯವಸ್ಥಾಪಕ ಪಿ. ರವಿಕುಮಾರ್ ಕೆಎಸ್‍ಎಫ್‍ಸಿ ಯ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಸಿ. ಶಿವಪ್ರಕಾಶ್. ಕೆಎಸ್‍ಐಎ ಉಪಾಧ್ಯಕ್ಷ ಐಸಾಕ್ ವಾಸ್,  ಎಸ್ ಬ್ಯಾಂಕ್ ಅಧಿಕಾರಿ ಲಲಿಪ್ ನಂದ, ಮತ್ತು ಗೋವಿಂದ ರಾಜು ಎನ್.ಎಸ್. ಕಾಸಿಯಾ ಪದಾಧಿಕಾರಿಗಳಾದ ಎಸ್.ಎಂ.ಹುಸೇನ್, ವಿಶಾಲ ಎಲ್.ಸಾಲಿಯಾನ್, ಕಾಸಿಯಾ ಕಾರ್ಯದರ್ಶಿ ಶ್ರೀಧರ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಎಂ.ಜಿ.ರಾಜ್ ಗೋಪಾಲ್ ನಿರೂಪಿಸಿದರು.