ಮಂಗಳೂರು, (ಜುಲೈ 28) : ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು, ಖಾಸಗೀ ಆಸ್ಪತ್ರೆಗಳನ್ನು ನಿಯಂತ್ರಿಸಲು, ಕೋವಿಡೇತರ ಆರೋಗ್ಯ ಸಮಸ್ಯೆಗಳಿಗೆ ಸೂಕ್ತ ಪರ್ಯಾಯ ವ್ಯವಸ್ಥೆ ಕಲ್ಪಿಸಲು, ಹೆರಿಗೆ ಸಂಬಂಧಿತ ಸಮಸ್ಯೆಗಳಿಗೆ ಪ್ರತ್ಯೇಕ ಆಂಬುಲೆನ್ಸ್ ಒದಗಿಸಲು, ಗರ್ಭಿಣಿ ಬಾಣಂತಿಯರು ಹಾಗೂ ಮಕ್ಕಳ ಪಾಲನೆಗೆ ಅಗತ್ಯವಾದ ಮಾತ್ರಶ್ರೀ ಯೋಜನೆಯನ್ನು ಮುಂದುವರಿಸಲು, ಪೌಷ್ಠಿಕ ಆಹಾರ ಪದಾರ್ಥಗಳನ್ನು ಕೇರಳ ಮಾದರಿಯಲ್ಲಿ ವಿತರಿಸಲು ಹಾಗೂ ಅನೇಕ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ (ಜೆಎಂಎಸ್‌) ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯಿಂದ ಜುಲೈ 28, ಮಂಗಳವಾರದಂದು ಮಿನಿವಿಧಾನ ಸೌಧದ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಜೆಎಂಎಸ್‌ನ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಜಯಂತಿ ಬಿ ಶೆಟ್ಟಿಯವರು,  ಸರಕಾರ ಕೂಡಲೇ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಒತ್ತಾಯಿಸಿದ್ದು ಸರ್ಕಾರ ಮಹಿಳೆಯನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು. 

ಈ ಸಂದರ್ಭದಲ್ಲಿ ಬೆಂಬಲ ಸೂಚಿಸಿ ಮಾತನಾಡಿದ ಭಾರತ ವಿದ್ಯಾರ್ಥಿ ಫೆಡರೇಶನ್‌ (ಎಸ್‌ಎಫ್‌ಐ) ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಮಾಧುರಿ ಬೋಳಾರ್‌ ಅವರು, ಆಶಾ ಕಾತರ್ಯಕರ್ತರನ್ನು, ವೈದ್ಯರನ್ನು, ಪೊಲೀಸ್‌ ಸಿಬ್ಬಂದಿಗಳನ್ನು ಕೊರೊನಾ ವಾರಿಯರ್ಸ್ ಎಂದು ಕರೆಯುವ ಸರ್ಕಾರ ವೇತನವನ್ನೇ ಸರಿಯಾದ ಸಮಯದಲ್ಲಿ ನೀಡುತ್ತಿಲ್ಲ. ಈ ಸಂಕಷ್ಟದ ಸಂದರ್ಭದಲ್ಲಿ ಅತಿಥಿ ಶಿಕ್ಷಕರು ಮತ್ತು ಮನೆ ಕೆಲಸಗಾರರ ಕಷ್ಟವನ್ನು ಪರಿಗಣಿಸಿ ಸರಕಾರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. 

ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಭಾರತಿ ಬೋಳಾರ್‌ ಸ್ವಾಗತಿಸಿ, ಜಿಲ್ಲಾ ಮುಖಂಡರಾದ ವಿಲಾಸಿನಿ ಧನ್ಯವಾದ ನೀಡಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಮುಖಂಡರುಗಳಾದ ಲೋಲಾಕ್ಷಿ ಬಂಟ್ವಾಳ, ಭವ್ಯ ಕುಪ್ಪೆಪದವು, ರೋಹಿಣಿ ಜಲ್ಲಿಗುಡ್ಡೆ, ಪ್ರತಿಭಾ ಮೊದಲಾದವರು ಉಪಸ್ಥಿತರಿದ್ದರು.