ಮಂಗಳೂರು: ನಗರದ ವಿಶ್ವ ವಿದ್ಯಾನಿಲಯ ಕಾಲೇಜು, ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಇತ್ತೀಚೆಗೆ ಬಿಡುಗಡೆ ಮಾಡಿರುವ ರಾಷ್ಟ್ರೀಯ ಸಾಂಸ್ಥಿಕ ರ‍್ಯಾಂಕಿಂಗ್ ಫ್ರೇಮ್ ವರ್ಕ್‌ನ (ಎನ್‌ಐಆರ್‌ಎಫ್) ನ ಶ್ರೇಯಾಂಕ ಪಟ್ಟಿಯಲ್ಲಿ ದೇಶದಲ್ಲೇ 200 ರ ಒಳಗಿನ ಸ್ಥಾನ ಪಡೆಯುವುದರಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಎನ್‌ಐಆರ್‌ಎಫ್ ನಲ್ಲಿ 200 ರ ಒಳಗಿನ ರ‍್ಯಾಂಕಿಂಗ್ ಪಡೆದ ರಾಜ್ಯದ ಆರು ಕಾಲೇಜುಗಳಲ್ಲಿ ಒಂದೆನಿಸಿದೆ.
ಮಂಗಳೂರಿನ ಸೈಂಟ್ ಅಲೋಷಿಯಸ್ ಕಾಲೇಜು ಸೇರಿದಂತೆ ನಾಲ್ಕು ಕಾಲೇಜುಗಳು 150 ರ ಒಳಗಿನ ಸ್ಥಾನ ಪಡೆದಿವೆ. ಉಳಿದ ಎರಡು ಕಾಲೇಜುಗಳು 150 ರಿಂದ 200 ಒಳಗಿನ ಸ್ಥಾನ ಪಡೆದಿದ್ದು ಅವುಗಳಲ್ಲಿ ವಿಶ್ವವಿದ್ಯಾನಿಲಯ ಕಾಲೇಜು ಕೂಡ ಒಂದು. ಇದರೊಂದಿಗೆ ಈ ಗೌರವಕ್ಕೆ ಪಾತ್ರವಾದ ಜಿಲ್ಲೆಯ ಕೇವಲ ಎರಡನೇ ಶಿಕ್ಷಣ ಸಂಸ್ಥೆ ಎಂಬ ಕೀರ್ತಿಗೆ ಭಾಜನವಾಗಿದೆ.
ಕಾಲೇಜಿನ ಹಿರಿಮೆಗಳು
ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು, ಅಂದರೆ ಹಿಂದಿನ ಗವರ್ನಮೆಂಟ್ ಕಾಲೇಜು ಇದೇ ಫೆಬ್ರವರಿ 6 ರಂದು ತನ್ನ 150 ನೇ ವಾರ್ಷಿಕೋತ್ಸವವನ್ನು (1868 -2018) ಅದ್ಧೂರಿಯಾಗಿ ಆಚರಿಸಿಕೊಂಡಿತ್ತು. ರಾಜ್ಯದ ಅತ್ಯಂತ ಹಳೆಯ ಸರ್ಕಾರಿ ಕಾಲೇಜುಗಳಲ್ಲಿ ಇದಕ್ಕೆ ಎರಡನೇ ಸ್ಥಾನವಿದೆ. ನಗರದ ಹೃದಯ ಭಾಗವಾದ ಹಂಪನಕಟ್ಟೆಯಲ್ಲಿ ಸುಮಾರು ಏಳೂವರೆ ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಈ ಕಾಲೇಜು 1993ರಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಘಟಕ ಕಾಲೇಜಾಗಿ ಪರಿವರ್ತನೆಯಾಯಿತು.
ಪಾರಂಪರಿಕ ಸ್ಥಾನಮಾನ
ಶತಮಾನ ದಾಟಿದ ಪುರಾತನ ಕಾಲೇಜು ಕಟ್ಟಡಗಳನ್ನು ರಕ್ಷಿಸುವ ಉದ್ದೇಶದಿಂದ 2016-17 ರಲ್ಲಿ ದೇಶದ ಒಟ್ಟು 19 ಹಳೆಯ ಕಾಲೇಜುಗಳಿಗೆ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ) ಪಾರಂಪರಿಕ ಸ್ಥಾನಮಾನ ನೀಡಿದೆ. ಇವುಗಳಲ್ಲಿ ರಾಜ್ಯದಿಂದ ಆಯ್ಕೆಯಾದ ಏಕೈಕ ಕಾಲೇಜು ಈ ವಿಶ್ವವಿದ್ಯಾನಿಲಯ ಕಾಲೇಜು. ತನ್ನ ಇಟಾಲಿಯನ್ ವಾಸ್ತುಶಿಲ್ಪ ಮತ್ತು ಕೆಂಬಣ್ಣದಿಂದ ಗಮನ ಸೆಳೆಯುವ ಈ ಕಾಲೇಜಿಗೆ ಕೆಂಪು ಕೋಟೆ ಎಂಬ ಹೆಸರೂ ಇದೆ.
ಸಿಪಿಇ ಮಾನ್ಯತೆ, ನ್ಯಾಕ್ ʼಎʼ ಗ್ರೇಡ್
2017-18 ನೇ ಸಾಲಿನಲ್ಲಿ ಯುಜಿಸಿಯಿಂದ ವಿಶ್ವವಿದ್ಯಾನಿಲಯ ಕಾಲೇಜಿಗೆ ಶ್ರೇಷ್ಠತಾ ಸಾಮರ್ಥ್ಯ ಮಾನ್ಯತೆ (College with Potential Excellence- CPE) ದೊರೆತಿದ್ದು ಈ ಸಂಬಂಧ ದೊರೆತ ರೂ. 1.5 ಕೋಟಿ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಸುಮಾರು 2000 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ವಿದ್ಯಾದೇಗುಲವಾಗಿರುವ ಕಾಲೇಜು, ತನ್ನ ಗುಣಾತ್ಮಕ ಶಿಕ್ಷಣಕ್ಕಾಗಿ 2016 ರಲ್ಲಿ ನ್ಯಾಕ್ ನಿಂದ ʼಎʼ ಗ್ರೇಡ್ ಪಡೆದುಕೊಂಡಿದೆ. 2016-17 ರಿಂದ ಪ್ರಾಧ್ಯಾಪಕರು ಮತ್ತು ದಾನಿಗಳ ನೆರವಿನಿಂದ ಅರ್ಹ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಉಚಿತ ಬಿಸಿಯೂಟ ನೀಡುವ ಯೋಜನೆ ಜಾರಿಯಾಗಿದ್ದು ಪ್ರತಿ ವರ್ಷ ಸುಮಾರು 200 ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.
“ಭವ್ಯ ಇತಿಹಾಸದಿಂದ ಭರವಸೆಯ ಭವಿಷ್ಯದೆಡೆಗೆ ಸಾಗುತ್ತಿರುವ ಕಾಲೇಜಿನ ಈ ಗೌರವ ಸ್ಫೂರ್ತಿ ನೀಡಿದೆ. ಕಾಲೇಜಿನ ಶಿಕ್ಷಕ- ಶಿಕ್ಷಕೇತರ ಸಿಬ್ಬಂದಿಗಳು, ಹಳೆ ವಿದ್ಯಾರ್ಥಿಗಳು, ಪೋಷಕರು ಮತ್ತು ಸಾವಿರಾರು ವಿದ್ಯಾರ್ಥಿಗಳಿಂದ ಇದು ಸಾಧ್ಯವಾಗಿದೆ. ಈ ಕಾಲೇಜಿನಲ್ಲಿ ಸುಮಾರು 65% ವಿದ್ಯಾರ್ಥಿನಿಯರಿದ್ದಾರೆ ಎಂಬುದು ಗಮನಿಸಬೇಕಾದ ಅಂಶ,” ಎಂದು ಕಾಲೇಜಿನ ಪ್ರಾಂಶುಪಾಲರು ಪ್ರತಿಕ್ರಿಯಿಸಿದ್ದಾರೆ.