ಮಂಗಳೂರು: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಯಲ ಮುಂದಿನ ಸೆಪ್ಟೆಂಬರ್ ನಲ್ಲಿ ವಿದ್ಯಾರ್ಥಿಗಳಿಗೆ ನಡೆಸಲು ಉದ್ದೇಶಿಸಿರುವ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಆಗ್ರಹಿಸಿ ದ.ಕ.ಜಿಲ್ಲಾ ಎನ್.ಎಸ್.ಯು.ಐ ವತಿಯಿಂದ ಶುಕ್ರವಾರ ಮಂಗಳೂರು ಮಹಾನಗರ ಪಾಲಿಕೆ ಬಳಿ ಧರಣಿ ನಡೆಸಲಾಯಿತು.

ಈ ವೇಳೆ ಧರಣಿ ನಿರತರರನ್ನು ಉದ್ದೇಶಿಸಿ ಮಾತನಾಡಿದ ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸವಾದ್ ಸುಳ್ಯ, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಯಲ ಹುಬ್ಬಳ್ಳಿ ಕಳೆದ ಆ.13 ರಂದು ಪರೀಕ್ಷೆ ಸುತ್ತೋಲೆಯನ್ನು ಕಳುಹಿಸಿದ್ದು, ರಾಜ್ಯ ಸರ್ಕಾರ ಹಾಗೂ ಯುಜಿಸಿ ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದೇ ಉತ್ತೀರ್ಣಗೊಳಿಸುವ ಆದೇಶ ಹೊರಡಿಸಿದರೂ ಕೂಡ ಕಾನೂನು ವಿಶ್ವವಿದ್ಯಾನಿಲಯ ಇದನ್ನೆಲ್ಲಾ ಬದಿಗಿರಿಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ನಡೆಸುವುದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಕೇರಳ ಹಾಗೂ ಇತರ ರಾಜ್ಯಗಳ ವಿದ್ಯಾರ್ಥಿ ಗಳು ಕಲಿಯುತ್ತಿದ್ದು, ಇವರೆಲ್ಲ ಸಮಸ್ಯೆಯನ್ನು ಅರಿತು ರಾಜ್ಯ ಸರ್ಕಾರ ತಕ್ಷಣ ಪರೀಕ್ಷೆಯನ್ನ ರದ್ದುಗೊಳಿಸಿ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕೆಂದು ಸವಾದ್ ಆಗ್ರಹಿಸಿದರು.

ಮಂಗಳೂರು ದಕ್ಷಿಣ ಎನ್.ಎಸ್.ಯು.ಐ ಅಧ್ಯಕ್ಷ ಶೌನಕ್ ರೈ ಮಾತನಾಡಿ, ಕಾನೂನು ವಿದ್ಯಾರ್ಥಿಗಳಿಗೆ ಶೇ.50ರಷ್ಟು ತರಗತಿಗಳು ನಡೆಯದಿಲ್ಲ. ಜೊತೆಗೆ ಗ್ರಂಥಾಲಯಗಳು ಕೂಡ ತೆರೆಯದ ಕಾರಣ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವುದು ಸರಿಯಲ್ಲ. ಕೋವಿಡ್ 19 ನಿಂದಾಗಿ ಯಾವುದೇ ವಸತಿ ನಿಲಯಗಳು, ಕಾಲೇಜ್ ಹಾಸ್ಟೆಲ್ ಗಳು ಬಂದಾಗಿರುವುದರಿಂದ ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಲಿದೆ. ಈ ಕೂಡಲೇ ಸರ್ಕಾರ ಪರೀಕ್ಷೆಯನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸುಹಾನ್ ಆಳ್ವ, ಜಿಲ್ಲಾ ಉಪಾಧ್ಯಕ್ಷ ಅನ್ವೀತ್ ಕಟೀಲ್, ಶೇಖ್ ಅಪ್ಸಾನ್, ರಕ್ಷಣ್ ಗೌಡ, ಪ್ರೆಸ್ಟನ್ ಮೊಂತೆರೊ, ವಿರೋನ್, ನೇಹಾ ಮತ್ತಿತರರು ಉಪಸ್ಥಿತರಿದ್ದರು.