ಮಂಗಳೂರು: ಶ್ರೀಮಂತ ಕೊಂಕಣಿ ಭಾಷೆಯನ್ನು ಶಿಕ್ಷಣದಲ್ಲಿ ಅಳವಡಿಸಲು ಮಂಗಳೂರು ವಿಶ್ವವಿದ್ಯಾನಿಲಯವು ಎರಡು ದೊಡ್ಡ ಪದಕೋಶ ಯೋಜನೆಗಳನ್ನು ಕೈಗೆತ್ತಿಕೊಂಡಿದೆಯೆಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ ಹೇಳಿದ್ದಾರೆ.

ಕೊಂಕಣಿ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿದ ನೆನಪಿಗೆ ಆಚರಿಸಲಾಗುವ ಮಾನ್ಯತಾ ದಿನದ ಅಂಗವಾಗಿ ಗುರುವಾರ ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠ ಮತ್ತು ವಿಶ್ವವಿದ್ಯಾನಿಲಯ ಕಾಲೇಜಿನ ಸ್ನಾತಕೋತ್ತರ ಕೊಂಕಣಿ ವಿಭಾಗ ಆಯೋಜಿಸಿದ್ದ ರಾಷ್ಟ್ರಮಟ್ಟದ ಆನ್ ಲೈನ್ ಉಪನ್ಯಾಸ ಸರಣಿಯ ಆಧ್ಯಕ್ಷತೆ ವಹಿಸಿ ಮಾತನಾಡಿದ ಕುಲಪತಿಗಳು,  ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕೊಂಕಣಿ ಕಲಿಯಲು ಮುಂದೆ ಬರಬೇಕೆಂದು ಕರೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಉದ್ಘಾಟನಾ ಸಂದೇಶ ನೀಡಿದರೆ, ಶಾಸಕ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್ ಹಾಗೂ ಶಾಂತಾರಾಮ ಸಿದ್ದಿಯವರು ಕೊಂಕಣಿ ಮಾನ್ಯತಾ ದಿನದ ಶುಭಸಂದೇಶ ನೀಡಿದರು. ವಿಶ್ವ ಕೊಂಕಣಿ ಕೇಂದ್ರದ ಬಸ್ತಿ ವಾಮನ ಶೆಣೈ, ಆಕಾಡೆಮಿ ಮಾಜಿ ಅಧ್ಯಕ್ಷ ರಾಯ್ ಕ್ಯಾಸ್ತಲಿನೊ, ಕೊಂಕಣಿ ಹೊರಾಟಗಾರ ಪಾವ್ಲ್ ಮೊರಾಸ್, ಸಾಹಿತಿ ಡಾ.ಗೀತಾ ಶೆಣೈ ಮಾನ್ಯತೆಯ ಹಿನ್ನೆಲೆ ವಿವರಿಸಿದರು.

ಪ್ರಸಿದ್ದ ಕೊಂಕಣಿ ಹೊರಟಾಗಾರ, ಸಾಹಿತಿ ಉದಯ ಬೆಂಬ್ರೆ ಇವರ ಆಶಯ ನುಡಿಗಳಿಂದ ಪ್ರಾರಂಭಗೊಂಡ ಕಿರುಉಪನ್ಯಾಸ ಸರಣಿಯಲ್ಲಿ, ಸಮನ್ವಯಕರಾಗಿ ಪ್ರಸಿದ್ದ ಕೊಂಕಣಿ ಸಾಹಿತಿ ಗೊಕುಲದಾಸ ಪ್ರಭು ಭಾಗವಹಿದ್ದರು.  ಗೊವಾ ವಿಶ್ವವಿದ್ಯಾನಿಲಯ ಕೊಂಕಣಿ ವಿಭಾಗ ಮುಖ್ಯಸ್ಥ ಡಾ ಪ್ರಕಾಶ್ ಪರಿಯೆನಕಾರ್, ಕೇಂದ್ರ ಸಾಹಿತ್ಯ ಆಕಾಡೆಮಿ ಕೊಂಕಣಿ ವಿಭಾಗದ ಸಮನ್ವಯಕಾರ ಡಾ ಭೂಷಣ್ ಭಾವೆ, ಅಖಿಲ ಭಾರತ ಕೊಂಕಣಿ ಪರಿಷದ್ ಅಧ್ಯಕ್ಷ ಉಶಾ ರಾಣೆ ಸೇರಿದಂತೆ ಕರ್ನಾಟಕ, ಗೋವಾ, ಕೇರಳ ಮತ್ತು ಮಹಾರಾಷ್ಟ್ರದ ವಿವಿಧ ಗಣ್ಯರು ಕೊಂಕಣಿ ಭಾಷೆಯ ವಿವಿಧ ಆಯಾಮಗಳನ್ನು ವಿಶ್ಲೇಷಿಸಿದರು.

ಕಾಲೇಜಿನ ಪ್ರಾಂಶುಪಾಲ ಡಾ. ಉದಯ ಕುಮಾರ್‌ ಎಂ.ಎ, ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ ರಾಮಕೃಷ್ಣ ಬಿ.ಎಂ ಉಪಸ್ಥಿತರಿದ್ದರು. ಕೊಂಕಣಿ ಪೀಠದ ಸಂಯೊಜಕ ಡಾ. ಜಯವಂತ ನಾಯಕ್ ಸ್ವಾಗತಿಸಿದರೆ, ಕೊಂಕಣಿ ಸ್ನಾತಕೊತ್ತರ ವಿಭಾಗದ ಸಂಯೊಜಕ ಡಾ ಬಿ ದೇವದಾಸ ಪೈ ಪ್ರಾಸ್ತವಿಕ ಸಂದೇಶ ನೀಡಿದರು. ಉಪನ್ಯಾಸಕ ಪ್ರೇಮ್ ಮೊರಾಸ್‌ ವಂದಿಸಿದರು. ಉಪನ್ಯಾಸಕರಾದ ವೆಂಕಟೇಶ ನಾಯಕ್ ಕಾರ್ಯಕ್ರಮ ನಿರ್ವಹಿಸಿದ್ದರು.