ಮಂಗಳೂರು : ಕಳೆದ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ಜನರ ಭಾವನಾತ್ಮಕ ನಿರ್ಧಾರಗಳಿಂದ ಕಾಂಗ್ರೆಸ್‍ಗೆ ಸೋಲಾಗಿದ್ದು, ಅಭಿವೃದ್ಧಿಯ ವಿಚಾರದಲ್ಲಿ ದೇಶಕ್ಕೆ ಕಾಂಗ್ರೆಸ್ ಅನಿವಾರ್ಯವಾಗಿದೆ. ಕೇಂದ್ರ ಸರಕಾರದ ತಪ್ಪು ಆರ್ಥಿಕ ನೀತಿಯಿಂದಾಗಿ ದೇಶವು ಇಂದು ಆರ್ಥಿಕ ದಿವಾಳಿತನಕ್ಕೆ ತಳ್ಳಲ್ಪಡುತ್ತಿದ್ದು, ಜನರ ಧ್ವನಿಯಾಗಿ ಕಾಂಗ್ರೆಸ್ ರೂಪುಗೊಳ್ಳಲಿದೆ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿದರು.

 ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಜರುಗಿದ ಕೆ.ಪಿ.ಸಿ.ಸಿ ಸತ್ಯಶೋಧನಾ ತಂಡದ ನೇತೃತ್ವ ವಹಿಸಿ ಅವರು ಕಾಂಗ್ರೆಸ್ ಪರಾಭವದ ಕುರಿತು ಮಾತನಾಡುತ್ತಿದ್ದರು. ನಾವು ಅಭಿವೃದ್ಧಿ ಕಾರ್ಯಗಳಲ್ಲಿ ಯಶಸ್ವಿಯಾಗಿದ್ದರೂ ಬಿ.ಜೆ.ಪಿಯವರು ಚುನಾವಣೆಯಲ್ಲಿ ರೂಪಿಸಿದ ತಂತ್ರಗಾರಿಕೆಯಿಂದ ನಾವು ವೈಫಲ್ಯ ಕಾಣುವಂತಾಯಿತು. ತಂತ್ರಕ್ಕೆ ಪ್ರತಿತಂತ್ರ ರೂಪಿಸುವಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮುಂದಡಿ ಇಡಬೇಕು ಎಂದು ಅವರು ಅಭಿಪ್ರಾಯಪಟ್ಟರು.