ಮಂಗಳೂರು (ಸೆಪ್ಟೆಂಬರ್ 07):- "ಸಮಾಜದಲ್ಲಿ ಇದ್ದಂತಹ ಅವಿಭಕ್ತ ಕುಟುಂಬಗಳು ಮಾಯವಾಗಿ ಈಗ ವಿಭಕ್ತ ಕುಟುಂಬಗಳನ್ನು ಹೆಚ್ಚು ಕಾಣುತ್ತೇವೆ. ಹಿರಿಯರ ಸೂಕ್ತ ಮಾರ್ಗದರ್ಶವಿಲ್ಲದೇ ಕುಟುಂಬದಲ್ಲಿ ಗಂಡ-ಹೆಂಡತಿ ಸಣ್ಣ ಸಣ್ಣ ಕಾರಣಗಳಿಂದ ಜಗಳವಾಡಿ ಸಂಶಯಪಟ್ಟು ಒಬ್ಬರಿಂದ ಒಬ್ಬರು ದೂರವಾಗುತ್ತಿದ್ದಾರೆ. ಕೋವಿಡ್ ವೈರಸ್ ವ್ಯಾಪಕವಾಗಿ ಹರಡಿದ ಪರಿಣಾಮದಿಂದಾಗಿ ದೇಶದಾದ್ಯಂತ ಕೆಲವು ತಿಂಗಳ ಕಾಲ ಲಾಕ್‍ಡೌನ್ ಜ್ಯಾರಿಗೊಳಿಸಲಾಗಿತ್ತು. ಇದರ ಪರಿಣಾಮ ಕುಟುಂಬದ ಎಲ್ಲಾ ಸದಸ್ಯರು ಮನೆಯಲ್ಲೇ ವಾಸ ಮಾಡಬೇಕಾದ ಕಾರಣ ಗಂಡ-ಹೆಂಡತಿ ಪರಸ್ಪರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಜೀವನ ಸಾಗಿಸಲು ಸೂಕ್ತವಾದ ಅವಕಾಶ ಸಿಕ್ಕಿತು" ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಣಾಧಿಕಾರಿ ಡಾ. ಸೆಲ್ವಮಣಿ ಹೇಳಿದರು.
ಅವರು ಜಿಲ್ಲಾ ಪಂಚಾಯತ್‍ನಲ್ಲಿ ನಡೆದ ಸಾಂತ್ವನ ಕೇಂದ್ರ ಹಾಗೂ ವರದಕ್ಷಿಣೆ ನಿಷೇಧ ಜಿಲ್ಲಾ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. "ಸಾಂತ್ವನ ಕೇಂದ್ರವು ನೊಂದ ಮಹಿಳೆಯರು ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳುವ ಒಂದು ವೇದಿಕೆಯಾಗಿದೆ. ಬಡವರು ಶ್ರೀಮಂತರು ಎನ್ನುವ ಭೇದ-ಭಾವವಿಲ್ಲದೇ ಎಲ್ಲರೂ ತಮ್ಮ ಕೌಟುಂಬಿಕ ಸಮಸ್ಯೆಗಳಿಗೆ ಸಾಂತ್ವನ ಕೇಂದ್ರದಲ್ಲಿ ಪರಿಹಾರ ಪಡೆದುಕೊಳ್ಳುತ್ತಿದ್ದಾರೆ. ಸಾಂತ್ವನ ಕೇಂದ್ರದಲ್ಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ವೇತನ ಬಾಕಿಯಿದ್ದು, ಇದರ ಬಗ್ಗೆ ಉನ್ನತ ಅಧಿಕಾರಿಗಳಿಗೆ ವೇತನ ಬಿಡುಗಡೆ ಮಾಡುವಂತೆ ಮನವಿಯನ್ನು ನೀಡಲಾಗುವುದು" ಎಂದರು.
ಜಿಲ್ಲಾ ನ್ಯಾಯಾಲದಲ್ಲಿ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ 1725 ಪ್ರಕರಣಗಳು ದಾಖಲಾಗಿವೆ. 1260 ಕೇಸ್‍ಗಳು ಇತ್ಯರ್ಥಗೊಂಡಿದ್ದು, 465 ಕೇಸ್‍ಗಳು ಇತ್ಯರ್ಥಗೊಳ್ಳದೇ ಬಾಕಿಯಾಗಿವೆ. ಉಳಿದಿರುವ ಪ್ರಕರಣಗಳಿಗೆ ಆದಷ್ಟು ಬೇಗನೇ ಇತ್ಯರ್ಥ ಮಾಡಿ ಕೊಡುವಂತೆ ಅಧಿಕಾರಿಗಳು ಗಮನಹರಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಉಪನಿರ್ದೇಶಕ ಉಸ್ಮಾನ್, ಜಿಲ್ಲಾ ನಿರೂಪಣಾ ಅಧಿಕಾರಿ ಶ್ಯಾಮಲಾ, ವಿವಿಧ ಸಾಂತ್ವನ ಕೇಂದ್ರದ ಮುಖ್ಯಸ್ಥರು ಸಭೆಯಲ್ಲಿ ಉಪಸ್ಥಿತರಿದ್ದರು.