ಮಂಗಳೂರು: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150ನೇ ಜಯಂತಿಯನ್ನು ಬಹಳ ಅದ್ದೂರಿಯಾಗಿ ಆಚರಿಸಲು ಜಿಲ್ಲಾ ಕಾಂಗ್ರೆಸ್ ನಿರ್ಧರಿಸಿದ್ದು ಇದೇ ಅಕ್ಟೋಬರ್ 2ರಂದು ಗಾಂಧಿ ನಡಿಗೆಯ ಜೊತೆಗೆ ಬೃಹತ್ ಸಾರ್ವಜನಿಕ ಸಭೆಯನ್ನು ಆಯೋಜಿಸಲಾಗಿದೆ ಎಂದು ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್‍ರವರು ಇಂದು ಹೇಳಿದರು.
ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಜರುಗಿದ ಕಾಂಗ್ರೆಸ್ ಕಾರ್ಪೋರೇಟರ್‍ಗಳು, ಮುಂಚೂಣಿ ಘಟಕದ ಜಿಲ್ಲಾಧ್ಯಕ್ಷರುಗಳ ಸಭೆಯಲ್ಲಿ ಗಾಂಧೀ ಜಯಂತಿಯ ಸಿದ್ಧತೆ ಕುರಿತು ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಗಾಂಧಿ ನಡಿಗೆ ಕಾರ್ಯಕ್ರಮಕ್ಕೆ ಅದೇ ದಿನ ಅಪರಾಹ್ನ 3 ಗಂಟೆಗೆ ಚಾಲನೆ ನೀಡಲಿದ್ದು, ಸಹಸ್ರಾರು ಕಾಂಗ್ರೆಸ್ ಕಾರ್ಯಕರ್ತರುಗಳು ಪಾದಯಾತ್ರೆ ಮೂಲಕ ಮಂಗಳೂರಿನ ಕರಾವಳಿ ಉತ್ಸವ ಮೈದಾನದಿಂದ ಲಾಲ್‍ಭಾಗ್ ಮಹಾನಗರ ಪಾಲಿಕೆಯ ಮುಂಭಾಗದಲ್ಲಿರುವ ಮಹಾತ್ಮ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆಗೈದು ನಂತರ ಎಂ.ಜಿ ರೋಡ್, ಪಿ.ವಿ.ಎಸ್, ಬಂಟ್ಸ್‍ಹಾಸ್ಟೆಲ್, ಅಂಬೇಡ್ಕರ್ ಸರ್ಕಲ್ ಮಾರ್ಗವಾಗಿ ಹಂಪನಕಟ್ಟಾ ಮುಖಾಂತರ ನಗರದ ಕುದ್ಮುಲ್ ರಂಗರಾವ್ ಪುರಭವನದ ಬಳಿಯಿರುವ ಗಾಂಧಿ ಪಾರ್ಕ್‍ನೊಳಗಿರುವ ಮಹಾತ್ಮ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆಗೈದು ಬಳಿಕ ಡಾ|| ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆಗೈದು ನಂತರ ಪುರಭವನದ ವಠಾರದಲ್ಲಿ ಸಭೆ ನಡೆಯಲಿದೆ. ಅಲ್ಲಿ ಆಯೋಜಿಸಲಾಗಿರುವ ಬಹಿರಂಗ ಸಭೆಯಲ್ಲಿ ಪರಿಣಿತ ಉಪನ್ಯಾಸಕರು ಗಾಂಧಿ ತತ್ವಾದರ್ಶಗಳ ಬಗ್ಗೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಪಾದಯಾತ್ರೆಯಲ್ಲಿ 8 ವಿಧಾನಸಭಾ ಕ್ಷೇತ್ರಗಳ ಕಾರ್ಯಕರ್ತರು ಶ್ವೇತ ವಸ್ತ್ರಧಾರಿಗಳಾಗಿ ಗಾಂಧಿ ಚರಕವಿರುವ ಪತಾಕೆಯೊಂದಿಗೆ ಗಾಂಧಿ ಚಿಂತನೆಯನ್ನೊಳಗೊಂಡ ಸಂದೇಶ ಹಾಗೂ ಕೀರ್ತನೆಗಳೊಂದಿಗೆ ಸರತಿಯ ಸಾಲಲ್ಲಿ ಸಾಗಿ ಬರಲಿದ್ದಾರೆ ಎಂದರು.
ಸಭೆಯಲ್ಲಿ ವಿಧಾನಪರಿಷತ್ತು ಸದಸ್ಯ ಐವನ್ ಡಿ’ಸೋಜಾ, ಮಾಜಿ ಶಾಸಕರಾದ ಮೊೈದಿನ್ ಬಾವ, ಜೆ.ಆರ್ ಲೋಬೋ, ಮುಖಂಡರುಗಳಾದ ಪಿ.ವಿ ಮೋಹನ್, ಮಿಥುನ್ ಎಂ.ರೈ, ಸದಾಶಿವ ಉಳ್ಳಾಲ್, ಶಶಿಧರ್ ಹೆಗ್ಡೆ, ಶಾಲೆಟ್ ಪಿಂಟೋ, ಸುರೇಂದ್ರ ಬಿ.ಕಂಬಳಿ, ಸದಾಶಿವ ಶೆಟ್ಟಿ, ವಿಶ್ವಾಸ್ ಕುಮಾರ್ ದಾಸ್, ನವೀನ್ ಡಿ’ಸೋಜಾ ಹಾಗೂ ಕಾರ್ಪೋರೇಟರ್‍ಗಳು ಉಪಸ್ಥಿತರಿದ್ದರು.