ಮಂಗಳೂರು : ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150ನೇ ಜಯಂತಿಯ ಪ್ರಯುಕ್ತ ಅಕ್ಟೋಬರ್ 2ರಂದು ಮಂಗಳೂರಿನಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಗಾಂಧೀಜಿಯವರ ತತ್ವಾದರ್ಶಗಳ ಪುನಶ್ಚೇತನಕ್ಕಾಗಿ ಸುಮಾರು 5 ಕಿ.ಮೀ ದೂರದ ಪಾದಯಾತ್ರೆ ಕೈಗೊಳ್ಳಲಾಗುವುದು. ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಂದ ಸಹಸ್ರಾರು ಕಾಂಗ್ರೆಸ್ ಕಾರ್ಯಕರ್ತರು ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದು ‘ನುಡಿದಂತೆ ನಡೆ’ ಎಂಬ ಗಾಂಧೀಜಿಯ ಸಂದೇಶವನ್ನು ಸಾರಲಿದ್ದಾರೆ ಎಂದು ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಕೆ.ಹರೀಶ್ ಕುಮಾರ್ ಇಂದು ಇಲ್ಲಿ ಹೇಳಿದರು.

ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಕರೆಯಲಾಗಿದ್ದ ಬ್ಲಾಕ್ ಮಟ್ಟದ ಅಧ್ಯಕ್ಷರು ಹಾಗೂ ವೀಕ್ಷಕರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತ, ಕರಾವಳಿ ಉತ್ಸವ ಮೈದಾನದಿಂದ ಮಹಾವೀರ ವೃತ್ತ ಹಾದು ಪುರಭವನದವರೆಗೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಪಾದಯಾತ್ರೆ ನಡೆಸಿ ಗಾಂಧೀ ಪಾರ್ಕ್ ಬಳಿ ಸಭೆ ಸೇರಲಿದ್ದಾರೆ ಎಂದರು.

ಮಾಜಿ ಸಚಿವ ರಮಾನಾಥ ರೈ ಮಾತನಾಡಿ ಇಂದು ಗಾಂಧೀಜಿಯ ಸಿದ್ಧಾಂತಗಳನ್ನು ನಾಡಿನ ಜನತೆಗೆ ತಲುಪಿಸುವ ಅನಿವಾರ್ಯತೆ ಇದೆ. ದೇಶದಲ್ಲಿ ತಲೆಯೆತ್ತಿರುವ ಕೋಮುವಾದಿ ಶಕ್ತಿಗಳನ್ನು ಎದುರಿಸಲು ಗಾಂಧೀ ಸಿದ್ಧಾಂತದ ಪ್ರಚಾರವು ಅತೀ ಮುಖ್ಯ. ಜಾತ್ಯಾತೀತ ಭಾರತವನ್ನು ಬಲಿಷ್ಠವಾಗಿ ಕಟ್ಟಬೇಕಾದುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ ಎಂದರು. ಸರಕಾರವು ‘ಭೇಟಿ ಬಚಾವೋ’ ಎಂಬ ಧ್ಯೇಯ ವಾಕ್ಯ ಪ್ರಚಾರಕ್ಕೆ ತಂದಿದ್ದರೂ ಕೂಡಾ ಅತ್ಯಾಚಾರ ಪ್ರಕರಣಗಳು ಆಗಾಗ ವರದಿಯಾಗುತ್ತಲೇ ಇದೆ. ಅತ್ಯಾಚಾರ ಸಂತ್ರಸ್ತರಿಗೆ ನ್ಯಾಯ ಕೂಡ ನಿರಾಕರಿಸಲ್ಪಡುತ್ತಿರುವುದು ದೇಶದ ದುರಂತ ಎಂದು ರೈಗಳು ಖೇದ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ವಿಧಾನಪರಿಷತ್ತು ಸದಸ್ಯ ಐವನ್ ಡಿ’ಸೋಜಾ, ಪಕ್ಷದ ಮುಖಂಡರಾದ ಭರತ್ ಮುಂಡೋಡಿ, ಎಂ.ಎಸ್ ಮಹಮ್ಮದ್, ಪುರುಷೋತ್ತಮ ಚಿತ್ರಾಪುರ, ಸದಾಶಿವ ಉಳ್ಳಾಲ್ ಉಪಸ್ಥಿತರಿದ್ದರು. ವಿಧಾನಸಭಾ ಕ್ಷೇತ್ರಗಳ ಬ್ಲಾಕ್ ಅಧ್ಯಕ್ಷರುಗಳು, ವೀಕ್ಷಕರುಗಳು ಚರ್ಚೆಯಲ್ಲಿ ಭಾಗವಹಿಸಿದ್ದರು. ಕಛೇರಿ ಕಾರ್ಯದರ್ಶಿ ನಝೀರ್ ಬಜಾಲ್, ಪ್ರೇಮ್ ಬಳ್ಳಾಲ್‍ಭಾಗ್, ಖಾಲಿದ್ ಉಜಿರೆ ಸಹಕರಿಸಿದ್ದರು.