ಮಂಗಳೂರು- ಮಂಗಳೂರಿನ ಲೇಡಿಹಿಲ್ ವೃತ್ತ ಅಂದರೆ ಲೇಡಿಹಿಲ್ ಜಂಕ್ಷನ್‍ಗೆ ಚಾರಿತ್ರಿಕ ಮಹತ್ವ ಇರುತ್ತದೆ. ಅಪೋಸ್ತಲಿಕ್ ಕಾರ್ಮೆಲ್ ಸಿಸ್ಟರ್ಸ್ ಫ್ರಾನ್ಸಿನಿಂದ ಮಂಗಳೂರಿಗೆ 1885ನೇ ಇಸವಿಯಲ್ಲಿ ಅಂದಿನ ಮದರ್ ಜನರಲ್ ಮಾರಿ ದೇಸ್ ಆಂಜ್ ಮಂಗಳೂರಿಗೆ ಬಂದಾಗ ಲೇಡಿಹಿಲ್ ಪ್ರದೇಶದಲ್ಲಿ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಶಾಲೆ ತೆರೆಯಬೇಕೆಂದು ಸ್ಥಳೀಯ ಸಾರ್ವಜನಿಕರು ಒತ್ತಾಯಪಡಿಸಿದ್ದರು. ಆ ಸಂದರ್ಭದಲ್ಲಿ ಅದೊಂದು ಗುಡ್ಡ ಸ್ಥಳವಾಗಿತ್ತು. ಅಂದಿನ ದಿನಗಳಲ್ಲಿ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅವಕಾಶ ಇರಲಿಲ್ಲ. ಆದುದರಿಂದ ಸ್ಥಳೀಯ ಜನರ ಒತ್ತಾಯದ ಮೇರೆಗೆ, ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ನೀಡಲು ಹೆಣ್ಣು ಮಕ್ಕಳ ಶಾಲೆಯನ್ನು ತೆರೆಯಲಾಗಿತ್ತು. ಈ ಶಾಲೆಯ ಮುಖಾಂತರ ಸಾವಿರಾರು ಹೆಣ್ಮಕ್ಕಳು ವಿದ್ಯಾಭ್ಯಾಸ ಹೊಂದಿ ಜೀವನದಲ್ಲಿ ಸಾಧನೆಯನ್ನು ಮಾಡಿದ್ದರು. ಸ್ಥಳೀಯ ಜನರು ಹೆಣ್ಮಕ್ಕಳ ಮೇಲಿನ ಅಭಿಮಾನದಿಂದ ಮತ್ತು ಗೌರವ ತೋರಿಸಲು ಸದ್ರಿ ಸ್ಥಳಕ್ಕೆ “ಲೇಡಿಹಿಲ್” ಎಂದು ನೂರಾರು ವರ್ಷಗಳಿಂದ ಕರೆಯುತ್ತಿದ್ದಾರೆ. ಹೆಣ್ಮಕ್ಕಳ ವಿದ್ಯಾಭ್ಯಾಸದ ಪ್ರತೀಕವಾಗಿ ಹಾಗೂ ಹೆಸರು ವಾಸಿಯಾದ ಈ ಸ್ಥಳದ ಹೆಸರನ್ನು ಬದಲಾಯಿಸುವುದು ಸಮಂಜಸವಲ್ಲ. ಇತಿಹಾಸವನ್ನು ಬದಲಾಯಿಸುವುದು ಸಮಂಜಸವಲ್ಲ.

ಇದಲ್ಲದೆ ಈ ಸ್ಥಳಕ್ಕೆ ಧಾರ್ಮಿಕ ಮಹತ್ವ ಕೂಡ ಇರುತ್ತದೆ. ಶಾಲೆಗಳನ್ನು ಅಪೋಸ್ತಲಿಕ್ ಕಾರ್ಮೆಲ್ ಧರ್ಮಭಗಿನಿಯರು, 'ಅವರ್ ಲೇಡಿ ಆಫ್ ಮೌಂಟ್ ಕಾರ್ಮಿಲ್' ಇವರ ಘೋಷಣೆಯಲ್ಲಿ ಸ್ಥಾಪಿಸಿದ್ದರು. ಯೇಸುವಿನ ತಾಯಿ ಮರಿಯರನ್ನು 'ಅವರ್ ಲೇಡಿ ಆಫ್ ಮೌಂಟ್ ಕಾರ್ಮಿಲ್' ಎಂದು ಉಲ್ಲೇಖಿಸಲಾಗಿದೆ. ಯೇಸುವಿನ ತಾಯಿ ಮೇರಿಯನ್ನು ಕಾಥೋಲಿಕ ಧರ್ಮದಲ್ಲಿ ಬಹಳಷ್ಟು ಶ್ರದ್ದೆ, ಗೌರವ, ಭಕ್ತಿಯಿಂದ ಕಾಣಲಾಗುತ್ತದೆ. “ಲೇಡಿಹಿಲ್” ಎಂಬ ಪದವು ಸದ್ರಿ ಮೇರಿ ಮಾತೆಯಾವರಿಗೆ ಸಂಬಂಧಿಸಿದ್ದಾಗಿರುತ್ತದೆ. ಆದುದರಿಂದ ಇದಕ್ಕೆ ಧಾರ್ಮಿಕ ಮಹತ್ವವಿದೆ. ಇದಲ್ಲದೆ, ಈ ಪರಿಸರದಲ್ಲಿ ಕ್ರೈಸ್ತ ಕುಟುಂಬಗಳು ಮತ್ತು ಸಂಸ್ಥೆಗಳು ಬಹು ಸಂಖ್ಯೆಯಲ್ಲಿವೆ. ಈ ಸ್ಥಳದ ಹೆಸರನ್ನು ಬದಾಲಾಯಿಸುವುದು ಕ್ರೈಸ್ತರ ಧಾರ್ಮಿಕ ಭಾವನೆಗಳಿಗೆ ನೋವು ಉಂಟು ಮಾಡುತ್ತದೆ. ಆದುದರಿಂದ ಯಥಾ ಸ್ಥಿತಿಯನ್ನು ಕಾಪಾಡುವುದು ಅಗತ್ಯವಾಗಿದೆ.

ಸದ್ರಿ ಸ್ಥಳದಲ್ಲಿ ಲೇಡಿಹಿಲ್ ಪೂರ್ವ ಪ್ರಾರ್ಧಮಿಕ ಶಾಲೆ, ಲೇಡಿಹಿಲ್ ಪ್ರಾರ್ಧಮಿಕ ಶಾಲೆ, ಲೇಡಿಹಿಲ್ ಹೈಸ್ಕೂಲ್, ಲೇಡಿಹಿಲ್ ಪಿಯು ಕಾಲೇಜು ನೂರಾರು ವರ್ಷಗಳಿಂದ ಇದೆ. ಇದಲ್ಲದೆ ರಾಷ್ಟೀಕೃತ ಬ್ಯಾಹಗಳಾದ ಕೆನಾರ ಬ್ಯಾಂಕ್, ಸೌತ್ ಇಂಡಿಯನ್ ಬ್ಯಾಂಕ್ ಗಳ ಶಾಖೆಗಳು ಲೇಡಿಹಿಲ್‍ನಲ್ಲಿ ಇವೆ. ಹಲವಾರು ಬಸ್ಸುಗಳ ಪರವಾನಿಗೆಯಲ್ಲಿ  “ಲೇಡಿಹಿಲ್ ಜಂಕ್ಷನ್” ಎಂದು ನಮೂದು ಇದೆ. ನೂರಾರು ಬಸ್ಸುಗಳ ಇದೇ ಲೇಡಿಹಿಲ್ ಜಂಕ್ಷನ್ ಮುಖಾಂತರ ಓಡಾಡುತ್ತಿವೆ. ಲೇಡಿಹಿಲ್ ಬಸ್ಸ್ ಸ್ಟ್ಯಾಂಡ್ ಇದೆ. ಲೇಡಿಹಿಲ್ ರಿಕ್ಷಾ ಸ್ಟ್ಯಾಂಡ್ ಇದೆ. ಮಂಗಳೂರು ಮಹಾನಗರ ಪಾಲಿಕೆ ದಿನಾಂಕ 30.01.2020 ರಂದು ತನ್ನ ನಡವಳಿಕೆ  ನಂಬ್ರ ಮನಪಾ/ಇಂ.ವಿ-1/ಸಿಆರ್-ಅ.ಕೋ89-2019-20/ಎಫ್-6ರಂತೆ ಲೇಡಿಹಿಲ್ ಜಂಕ್ಷನ್‍ನಲ್ಲಿ ಲೇಡಿಹಿಲ್ ವೃತ್ತವನ್ನು ವಿನೂತನ ಮಾದರಿಯಲ್ಲಿ ವಿನ್ಯಾಸಗೊಳಿಸಿ ಅಭಿವೃದ್ಧಿ ಪಡಿಸಿ ನಿರ್ವಹಣೆ ಮಾಡುವರೆ ಮುಂದಿನ 3 ವರ್ಷಗಳಿಗೆ ಕರ್ನಾಟಕ   ಬ್ಯಾಂಕ್   ಇವರಿಗೆ   ಅನುಮತಿ ನೀಡಿರುತ್ತಾರೆ. ಇದಲ್ಲದೆ ಮಂಗಳೂರು ಮಹಾನಗರ ಪಾಲಿಕೆಯ ಠರಾವೂ ಸಂಖ್ಯೆ 98/2018-

19 ದಿನಾಂಕ 28.02.2019 ರಂತೆ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಲೇಡಿಹಿಲ್ ಜಕ್ಷನ್‍ನಿಂದ ನ್ಯೂಚಿತ್ರ ಜಂಕ್ಷನ್‍ವರೆಗಿನ ರಸ್ತೆಗೆ “ಶ್ರೀ ಗೋಕರ್ಣನಾಥ ಕ್ಷೇತ್ರ ರಸ್ತೆ” ಎಂದು ನಾಮಕರಣ ಮಾಡಲು ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಗಿತ್ತು.  

ಈ ಹಿಂದೆ 2003ರಲ್ಲಿ ಮತ್ತು 2018ರಲ್ಲಿ ಲೇಡಿಹಿಲ್ ಜಂಕ್ಷನ್/ಲೇಡಿಹಿಲ್ ಸರ್ಕಲ್ ಹೆಸರನ್ನು ಬದಲಾಯಿಸಲು ಪ್ರಯತ್ನಿಸಲಾಗಿತ್ತು. ಆದರೆ ಸಾರ್ವಜನಿಕರ ಆಕ್ಷೇಪಣೆ ಮೇರೆಗೆ ಆ ಪ್ರಸ್ತಾವನೆಯನ್ನು ಕೈ ಬಿಡಲಾಗಿತ್ತು. ಆದುದರಿಂದ ಮತ್ತೊಮ್ಮೆ ಅದೇ ಪ್ರಸ್ತಾವನೆಯನ್ನು ಕೈಗೆತ್ತಿಕೊಳ್ಳುವುದು ಸಮಂಜಸವಲ್ಲ.

ಪ್ರಸ್ತುತ ಇರುವ ಲೇಡಿಹಿಲ್ ಜಂಕ್ಷನ್/ಲೇಡಿಹಿಲ್ ಸರ್ಕಲ್ ಗೆ ನೂರಾರು ವರ್ಷಗಳ ಇತಿಹಾಸ ಇರುವುದರಿಂದ ಹಾಗೂ ವಿದ್ಯಾಭ್ಯಾಸದ ಮೂಲಕ ಸ್ತ್ರೀಯರ ಸಬಲೀಕರಣದ ಧ್ಯೋತಕವಾಗಿರು (ಸಂಕೇತವಾಗಿರುವ)ವುದರಿಂದ ಹಾಗೂ ಕ್ರೈಸ್ತರ ಧಾರ್ಮಿಕ ಭಾವನೆಗಳಿರುವ ಲೇಡಿಹಿಲ್ ಹೆಸರನ್ನು ಬದಲಾಯಿಸುವುದಕ್ಕೆ ತೀವ್ರ ಆಕ್ಷೇಪಣೆ ಇದೆ.

ಈ ವೃತ್ತದ ಹೆಸರನ್ನು ಬದಲಾಯಿಸುವ ಪ್ರಸ್ತಾಪ ಇದ್ದಲ್ಲಿ ಅದನ್ನು ಕೈ ಬಿಡಬೇಕಾಗಿ ಇಡೀ ಸಂಸ್ಥೆಯ ಪರವಾಗಿ ಕಥೊಲಿಕ್ ಸಭಾ ಮಂಗಳೂರು ಪ್ರದೇಶ ಇದರ ಅಧ್ಯಕ್ಷರಾದ ಶ್ರೀಮಾನ್ ಪಾವ್ಲ್ ರೊ ಎಐಸಿಯು ಅಧ್ಯಕ್ಷರಾದ ಶ್ರೀಮಾನ್ ಲ್ಯಾನ್ಸಿ ಡಿ’ಕುನ್ಹಾ ಲೇಡಿಹಿಲ್ ಶಿಕ್ಷಣ ಸಂಸ್ಥೆಯ ಸಹ ಕಾರ್ಯದರ್ಶಿ ಭಗಿನಿ ರೊಸಿಲ್ಡಾ ಎ.ಸಿ ಪ್ರಾಂಶುಪಾಲರಾದ ಭಗಿನಿ ಉಜ್ವಲ ಎ.ಸಿ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾದ ರಾಜೇಶ್ ಶೆಟ್ಟಿ ಸದಸ್ಯರಾದ ವಿಜೇಂದ್ರ ಶೆಟ್ಟಿ ಜಿಲ್ಲಾದಿಕಾರಿಗಳಿಗೆ ಮನವಿ ಸಲ್ಲಿಸಿದರು.