ಮಂಗಳೂರು ;- ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿರುವ ಆಸ್ತಿಗಳನ್ನು ಕರ್ನಾಟಕ ಸರಕಾರದ ಅಧೀನ ಸಂಸ್ಥೆಯಾಗಿರುವ ಕರ್ನಾಟಕ ಮುನಿಸಿಪಲ್ ಡಾಟಾ ಸೊಸೈಟಿ (ಪೌರಾಡಳಿತ ಸುಧಾರಣಾ ಕೋಶ) ಇವರಿಂದ ಅಭಿವೃದ್ಧಿಗೊಳಿಸಲಾದ ಇ-ತಂತ್ರಾಂಶ ವ್ಯವಸ್ಥೆಯಡಿ ಖಾಲಿ ನಿವೇಶನ ಮತ್ತು ಕಟ್ಟಡಗಳ ಇ-ಖಾತೆಯನ್ನು ಸಾರ್ವಜನಿಕರಿಗೆ ವಿತರಿಸುವ ಸಲುವಾಗಿ ಮಾಹಿತಿಗಳನ್ನು ಕ್ರೋಡೀಕರಿಸಲಾಗುತ್ತಿದೆ.

      ಅದರಂತೆ ಪಾಲಿಕೆ ವ್ಯಾಪ್ತಿಯ ಆಸ್ತಿಗಳಿಗೆ ಸಂಬಂಧಿಸಿದಂತೆ ಖಾತಾ ನೊಂದಣಿ ಮತ್ತು ವರ್ಗಾವಣೆ ಕೋರಿ ಅರ್ಜಿ ಸಲ್ಲಿಸುವಾಗ ಖರೀದಿದಾರರ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ಹಾಗೂ ಆಧಾರ್ ಕಾರ್ಡ್‍ನ ಪ್ರತಿ ಮತ್ತು ಪೋಸ್ಟ್ ಕಾರ್ಡ್ ಅಳತೆಯ ಆಸ್ತಿಯ ಭಾವಚಿತ್ರವನ್ನು ಅರ್ಜಿ ನಮೂನೆಯೊಂದಿಗೆ ಸಲ್ಲಿಸುವ ಇತರ ದಾಖಲೆಗಳೊಂದಿಗೆ ಹೆಚ್ಚುವರಿಯಾಗಿ ಸಲ್ಲಿಸುವಂತೆ ಸೂಚಿಸಲಾಗಿದೆ.

     ಅರ್ಜಿದಾರರು ಚಾಲ್ತಿ ಸಾಲಿನ ಆಸ್ತಿ ತೆರಿಗೆಯನ್ನು ಪಾವತಿಸಿದ ರಶೀದಿಯ ಪ್ರತಿಯನ್ನು ತಪ್ಪದೇ ಸಲ್ಲಿಸಬೇಕು. ಇ-ಖಾತಾ ವಿತರಣೆಗೆ 45 ದಿನಗಳ ಕಾಲಮಿತಿಯನ್ನು ನಿಗದಿಪಡಿಸಲಾಗಿದೆ. ಈ ಹಿಂದೆಯೂ ಅರ್ಜಿ ಸಲ್ಲಿಸಿದವರಿಂದ ಮೇಲೆ ತಿಳಿಸಿದ ಹೆಚ್ಚುವರಿ ದಾಖಲೆಗಳನ್ನು ಒದಗಿಸುವಂತೆ ಸೂಚಿಸಲಾಗಿದೆ.

    ರಾಜ್ಯಾದ್ಯಂತ 10 ಮಹಾನಗರಪಾಲಿಕೆಗಳು ಸೇರಿದಂತೆ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಇ-ಖಾತಾ ಪದ್ದತಿಯನ್ನು ಈಗಾಗಲೇ ಜಾರಿಗೊಳಿಸಿದ್ದು ಸಾರ್ವಜನಿಕರು ಸಹಕರಿಸುವಂತೆ ಮಂಗಳೂರು ಮಹಾನಗರಪಾಲಿಕೆಯ ಆಯುಕ್ತರ ಪ್ರಕಟಣೆ ತಿಳಿಸಿದೆ.