ಮಂಗಳೂರು:- "ನಿರಂತರ ಯೋಗ ಮಾಡುವುದರಿಂದ ನಮ್ಮ ಆರೋಗ್ಯವನ್ನು ವೃದ್ಧಿಸಿಕೊಂಡು ಪರಿಪೂರ್ಣ ಆರೋಗ್ಯ ಹೊಂದಲು ಸಾಧ್ಯ" ಎಂದು ಆರ್ ಎಸ್ ಎಸ್ ಪ್ರಮುಖ್ ಹಾಗೂ ಹೊಸದಿಗಂತ ಸಂಸ್ಥೆಯ ಮುಖ್ಯಕಾರ್ಯಾ ನಿರ್ವಹಣಾಧಿಕಾರಿ ಪಿ.ಎಸ್. ಪ್ರಕಾಶ್ ಹೇಳಿದರು.

ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಇವರ ಸಂಯುಕ್ತ ಆಶ್ರಯಲ್ಲಿ ನಗರದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ತುಳುಭವನದ ಸಿರಿಚಾವಡಿಯಲ್ಲಿ ಹತ್ತುದಿನಗಳ ಕಾಲ ಹಮ್ಮಿಕೊಂಡಂತಹ "ಉಚಿತ ದ್ಯಾನ-ಯೋಗ ಶಿಬಿರ"ದಲ್ಲಿ ಮುಖ್ಯ ಅಥಿತಿಗಳಾಗಿ ಪಾಲ್ಗೊಂಡು ಮಾತನಾಡಿದರು.

"ಇಂದಿನ ಅಧುನಿಕ ಶೈಲಿಯ ಜೀವನ ಪದ್ಧತಿಯಿಂದ ನಮ್ಮ ಆರೋಗ್ಯ ಅನಾರೋಗ್ಯದ ಕಡೆ ವಾಲುತ್ತಿದೆ.  ಇದರಿಂದ ಹೊರ ಬಂದು ನಮ್ಮ ಜೀವನ ಶೈಲಿಯನ್ನು ನಾವು ಬದಲಾಯಿಸ ಬೇಕಾಗಿದೆ. ಮನಸ್ಸಿನ ಆರೋಗ್ಯ ಹಾಗೂ ಶರೀರದ ಬಾಹ್ಯ ಮತ್ತು ಒಳಗಿನ ಎಲ್ಲವನ್ನು ಸಮತೋಲನದಲ್ಲಿಡಲು ಯೋಗ ಸಹಕಾರಿ" ಎಂದು ಅವರು ಹೇಳಿದರು.

"ಇಂದು ವೈದ್ಯರು ಕೂಡ ಯೋಗ ಮಾಡುವಂತೆ ಸಲಹೆ ನೀಡುತ್ತಾರೆ. ಮಾತ್ರವಲ್ಲದೇ ಸ್ವತಃ ತಾವೂ ಕೂಡ ಯೋಗ ಮಾಡುತ್ತಾರೆ. ಇವತ್ತು ಇಡೀ ಜಗತ್ತೇ  ಯೋಗವನ್ನು ಒಪ್ಪಿಕೊಂಡಿದೆ. ಇಂದು ವಿಶ್ವದ 185 ದೇಶಗಳು ಯೋಗ ದಿನಾ ಆಚರಿಸುತ್ತಿದೆ. ಇದಕ್ಕೆ ಕಾರಣ ಭಾರತ. ಯೋಗದಿಂದ ಎಲ್ಲವೂ ಸಾಧ್ಯ. ಜಗತ್ತಿನ ಶಾಂತಿ ಭಾರತದ ಶಕ್ತಿಯಲ್ಲಿ ಅಡಗಿದೆ. ಭಾರತ ಶಕ್ತಿ ಶಾಲಿಯಾದರೆ ಜಗತ್ತಿನಲ್ಲಿ ಶಾಂತಿ ಲಭಿಸಲು ಸಾಧ್ಯ. ಇದಕ್ಕೆ ಪುರಾತನ ಕಾಲದಿಂದಲೂ ಬಂದಂತಹ  ಭಾರತದ ಯೋಗ ಎಲ್ಲೆಡೆ ವ್ಯಾಪಿಸಬೇಕು. ಯೋಗ ಮಾಡುವುದರಿಂದ ಸರ್ವರಿಗೂ ಯೋಗ ಲಭಿಸುವುದು" ಎಂದು ಪಿ.ಎಸ್. ಪ್ರಕಾಶ್ ಅಭಿಪ್ರಾಯ ವ್ಯಕ್ತಪಡಿಸಿದರು.

 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ತುಳು ಅಕಾಡೆಮಿ ಅಧ್ಯಕ್ಷ  ದಯಾನಂದ ಜಿ. ಕತ್ತಲ್ ಸಾರ್ ಅವರು ಮಾತನಾಡಿ, "ಬದಲಾದ ನಮ್ಮ ಜೀವನ ಶೈಲಿಯಿಂದ ಇಂದು ಎಲ್ಲೆಡೆ ಅನಾರೋಗ್ಯದ ಭಯ ಕಾಡುತ್ತಿದೆ. ಆದರೆ ನಮ್ಮ ದೇಹದ ಸಹಸ್ರ ನರನಾಡಿಗಳು ಸುಸೂತ್ರವಾಗಿ ಕಾರ್ಯನಿವಾಹಿಸುವಂತೆ ಮಾಡುವ ಮೂಲಕ ನಮ್ಮ ಆರೋಗ್ಯ ವೃದ್ಧಿಸುವಂತೆ ಮಾಡುವ ಶಕ್ತಿ ಯೋಗಕ್ಕಿದೆ. ಮಾನಸಿಕ ಒತ್ತಡದಿಂದ ದೈಹಿಕ ರೋಗಗಳು ಹೆಚ್ಚಾಗಿ ಕಾಡುತ್ತಿರುವ ಇಂದಿನ ದಿನಗಳಲ್ಲಿ ದೈಹಿಕ ದುರ್ಬಲತೆಯನ್ನು ಹೋಗಲಾಡಿಸಿ ಆರೋಗ್ಯವಂತರಾಗಿರಲು ಯೋಗ ಬಹಳ ಸಹಕಾರಿ. ಭಾರತದ ಪುರಾತನ ಸಂಸ್ಕೃತಿಯಾದ ಯೋಗದಿಂದ ಇಂದಿನ ಕೊರೋನಾದಂತಹ ಮಾರಕ ರೋಗ ಬರದಂತೆಯೂ ತಡೆಯಲು ಸಾಧ್ಯ" ಎಂದು ಹೇಳಿದರು.

ರೋ. ಜಿಲ್ಲಾ ಗವರ್ನರ್ ರೋ. ಎಂ.ರ,ಗನಾಥ್ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಾಹಾರೈಸಿದರು. ಯೋಗ ತರಬೇತಿ ನೀಡಲು ಬಂದಂತ "ಧೀ ಶಕ್ತಿ ಜ್ಞಾನ ಯೋಗ"ದ ಗುರೂಜಿಯವರು ಯೋಗದ ಮಹತ್ವವನ್ನು ವಿವರಿಸಿದರು.

ವೇದಿಕೆಯಲ್ಲಿ ಅತಿಥಿಗಳಾದ ಮಾಜಿ ಮೇಯರ್, ಮನಪಾ ಸದಸ್ಯ ಶಶಿಧರ್ ಹೆಗ್ಡೆ, ಸ್ಥಳೀಯ ಮನಪಾ ಸದಸ್ಯರಾದ ಗಣೇಶ್ ಕುಲಾಲ್, ಶ್ರೀಮತಿ ಜಯಲಕ್ಷ್ಮೀ ಶೆಟ್ಟಿ, ಮಾಜಿ ಗವರ್ನರ್, ರೋ. ಡಾ.ದೇವದಾಸ್ ರೈ ಮುಂತಾದವರು  ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಂಚಾಲಕ, ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್‌ನ ಸದಸ್ಯ ಹಾಗೂ ರೋಟರಿ ಸಂಸ್ಥೆಯ ಸಾಂಸ್ಕೃತಿಕ ಚಟುವಟಿಕೆಗಳ ಜಿಲ್ಲಾ ಚೆಯರ್‌ಮೆನ್ ರೋ. ರಾಜಗೋಪಾಲ ರೈ ಸ್ವಾಗತಿಸಿ, ಪ್ರಸ್ತಾವನೆಗೈದರು.  "ಮಧುಮೇಹ,ರಕ್ತದೊತ್ತಡ(BP),ಗಂಟು ನೋವು, ಬೆನ್ನು ನೋವು, ಮಾನಸಿಕ ಒತ್ತಡ ಹಾಗೂ ಇನ್ನಿತರ ಖಾಯಿಲೆ ಹಾಗೂ ನಮ್ಮ ಆರೋಗ್ಯಯುತ ಜೀವನಕ್ಕಾಗಿ "ಧೀ ಶಕ್ತಿ ಜ್ಞಾನ ಯೋಗ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.  ಅನೇಕಾನೇಕ ವೈದ್ಯಕೀಯ ಚಿಕಿತ್ಸೆಯಿಂದ ಗುಣಪಡಿಸಲಾಗದಂತ ರೋಗಗಳನ್ನು ತಡೆಗಟ್ಟುವಂತಹ ಶಕ್ತಿ ಪ್ರಾಣಾಯಾಮಕ್ಕೆ ಇರುವುದು ನಮಗೆಲ್ಲರಿಗೂ ಗೊತ್ತಿರುವಂತಹ ವಿಚಾರ. ಹಲವಾರು ಮಂದಿ ಮಾನಸಿಕ ಒತ್ತಡ ಹಾಗೂ ಅನೇಕ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದಕ್ಕೆಲ್ಲ ಯೋಗದಿಂದ ಪರಿಹಾರ ಪಡೆಯ ಬಹುದು ಎಂದು ಹೇಳಿದರು. ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್‌ನ ಅಧ್ಯಕ್ಷರಾದ ರೋ.ಪ್ರಕಾಶ್ಚಂದ್ರ ಧನ್ಯವಾದ ಸಮರ್ಪಿಸಿದರು.