ಮಂಗಳೂರು: ಜನರ ಮಧ್ಯೆ ಅಪನಂಬಿಕೆ ಸೃಷ್ಟಿ ಮಾಡಲು ಇಸ್ಲಾಂನ ಜಿಹಾದನ್ನು ವೈಭವೀಕರಣ ಮಾಡಲಾಗುತ್ತಿದೆ. ಇಂದು ನಡೆಯುತ್ತಿರುವ ಉಗ್ರವಾದಕ್ಕೂ ಭಯೋತ್ಪಾನೆಗೂ ಇಸ್ಲಾಂನ ಜಿಹಾದ್ ಗೂ ಯಾವುದೇ ಸಂಬಂಧವಿಲ್ಲ. ಅಂತಹ ಭಯೋತ್ಪಾದನೆಯ ವಿರುದ್ಧ ಭಾರತದ ಉಲೆಮಾಗಳ ಸಂಘ ಫತ್ವಾ ಹೊರಡಿಸಿದೆ ಎಂದು ಕರ್ನಾಟಕ ಜಮೀಯತ್ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಮೌಲನಾ ಶಾಫಿ ಸಾದಿ ಹೇಳಿದರು.

ಕರ್ನಾಟಕ ಮುಸ್ಲಿಂ ಜಮಾಅತ್ ದ.ಕ. ಜಿಲ್ಲಾ ಸಮಿತಿ ವತಿಯಿಂದ  ಬುಧವಾರ ನಗರದ ಓಶಿಯನ್ ಪರ್ಲ್ ನಲ್ಲಿ ಆಯೋಜಿಸಲಾದ ಸೌಹಾರ್ದ ಸಮಾಗಮ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿ, ಭಯೋತ್ಪಾದಕರು, ಉಗ್ರವಾದಿಗಳು ಮುಸ್ಲಿಮರಲ್ಲ ಎಂದು 1400 ವರ್ಷಗಳ ಹಿಂದೆಯೇ ಪೈಗಂಬರ್ ಮಹಮ್ಮದರು ಫತ್ವಾ ಹೊರಡಿಸಿದ್ದಾರೆ. ಅದೇ ರೀತಿ ಕೋಮುವಾದಕ್ಕೆ ಪ್ರಚೋದನೆ ನೀಡುವವ ಮುಸಲ್ಮಾನನಲ್ಲ. ಪ್ರಚೋದನೆ ನೀಡಿ ಯುದ್ಧದಲ್ಲಿ ಸಾಯುವವನೂ ಮುಸ್ಲಿಮನಲ್ಲ ಎಂದು ಹೇಳಿದರು.

ನಾವೆಲ್ಲರೂ ಒಟ್ಟಾಗಿ ಬದುಕುವ ಕಾಲ ಇದು. ಸೌಹಾರ್ದತೆ, ಸಾಮರಸ್ಯ ಬೆಳೆಸಿಕೊಳ್ಳಬೇಕಾಗಿದೆ. ಕುರುಕ್ಷೇತ್ರ ಯುದ್ಧ ಹೇಗೆ ಒಂದು ಕುಟುಂಬದ ಕಲಹವಾಗಿತ್ತೋ, ಅದೇ ರೀತಿ ಧರ್ಮ ಜಾತಿಯ ವಿರುದ್ಧವಾಗಿರಲಿಲ್ಲ ಮುಸ್ಲಿಮ್ ನ ಜಿಹಾದ್ ಎಂದು ಮೌಲನಾ ಶಾಫಿ ಸಾದಿ ಹೇಳಿದರು.

ಕೇಮಾರು ಮಠದ ಈಶವಿಠಲದಾಸ ಸ್ವಾಮೀಜಿ ಮಾತನಾಡಿ, ಈ ಕಾರ್ಯಕ್ರಮದ ಮೂಲಕ ನಾವೆಲ್ಲರೂ ಒಟ್ಟಾಗಿದ್ದೇವೆ. ಈ ಮೂಲಕ‌ ನಮ್ಮ ಮಂಗಳೂರು ಕೂಡಾ ಶಾಂತವಾಗಲಿ, ನಮ್ಮ ರಾಜ್ಯ, ದೇಶವೂ ಶಾಂತವಾಗಲಿ ಎಂಬುದು ನನ್ನ ಪ್ರಾರ್ಥನೆ. ಕರ್ನಾಟಕ ಮುಸ್ಲಿಂ ಜಮೀಯತ್ ಹುಟ್ಟು ಹಾಕಿದ ಈ ಉದ್ದೇಶ ದೊಡ್ಡ ವೃಕ್ಷವಾಗಿ ಬೆಳೆಯಲಿ. ಇಡೀ ಜಗತ್ತನ್ನು ಹಸಿರುಗೊಳಿಸಲು ಸಣ್ಣ ಬೀಜ ಸಾಕಾಗುತ್ತದೆ ಎಂದು ಹೇಳಿದರು.