ಮಂಗಳೂರು: ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರಿನ ಹಿಂದಿ ಸ್ನಾತಕೋತ್ತರ ವಿಭಾಗ, ಮಂಗಳೂರು ವಿಶ್ವವಿದ್ಯಾನಿಲಯ, ಮತ್ತು ಮಡಿಕೇರಿಯ ಫೀಲ್ಡ್‌ ಮಾರ್ಷಲ್‌ ಕೆ.ಎಂ ಕಾರ್ಯಪ್ಪ ಕಾಲೇಜಿನ ಹಿಂದಿ ವಿಭಾಗದ ಸಹಯೋಗದೊಂದಿಗೆ ಶುಕ್ರವಾರ ಆಯೋಜಿಸಲಾಗಿದ್ದ ರಾಷ್ಟ್ರಮಟ್ಟದ ವೆಬಿನಾರ್‌ ವಿವಿಧ ಆಯಾಮಗಳಲ್ಲಿ ಮಹಿಳಾ ಸಾಹಿತ್ಯದ ಮೇಲೆ ಬೆಳಕು ಚೆಲ್ಲಿತು.

ಮೈಸೂರು ವಿಶ್ವವಿದ್ಯಾನಿಲಯದ ಪ್ರೊ. ಪ್ರತಿಭಾ ಮುದಲಿಯಾರ್‌, ಸಮಕಾಲೀನ ಕನ್ನಡ ಮತ್ತು ಹಿಂದಿ ಮಹಿಳಾ ಸಾಹಿತ್ಯದಲ್ಲಿ ಆದಿವಾಸಿಗಳ ಸಮಸ್ಯೆಗಳ ಕುರಿತು ಹಲವಾರು ಬರವಣಿಗೆಗಳು ಬೆಳಕು ಚೆಲ್ಲಿವೆ ಎಂದು ದೃಷ್ಟಾಂತ ಸಹಿತ ವಿವರಿಸಿದರು. ಕರ್ನಾಟಕ ವಿಶ್ವವಿದ್ಯಾನಿಲಯದ ಡಾ. ಎಸ್‌.ಕೆ ಪವಾರ್‌ ಸಮಕಾಲೀನ ಮಹಿಳಾ ಸಾಹಿತ್ಯದಲ್ಲಿ ದಲಿತ ಮಹಿಳೆಯರ ಸ್ಥಾನಮಾನದ ಬಗೆಗೆ ಬೆಳಕು ಚೆಲ್ಲಿದರು. ಪೂನಾ ವಿಶ್ವವಿದ್ಯಾನಿಲಯದ ಪ್ರೊ. ಎಸ್‌ ಕೆ ಶಾಕಿರ್‌ ಮುಸ್ಲಿಂ ಮಹಿಳೆಯರ ಸಮಕಾಲೀನ ಸಾಹಿತ್ಯ ಅವರು ಸಮಾಜದಲ್ಲಿ ಎದುರಿಸುತ್ತಿರುವ ಸವಾಲುಗಳನ್ನು ಪ್ರತಿಬಿಂಬಿಸಿವೆ ಎಂದರು. ವಿಜಾಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪ್ರೊ. ನಾಮದೇವ ಗೌಡ ಸಮಕಾಲೀನ ಮಹಿಳಾ ಸಾಹಿತ್ಯದಲ್ಲಿ ಮಹಿಳಾ ಪ್ರಜ್ಞೆಯ ಜಾಗೃತಿಯನ್ನು ಗುರುತಿಸಿದರು.

ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಸ್‌. ಯಡಪಡಿತ್ತಾಯ, ಸಮಾಜದ ಓರೆಕೋರೆಗಳನ್ನು ಯತಾವತ್ತಾಗಿ ದಾಖಲಿಸುವ ಮಹಿಳಾ ಸಾಹಿತ್ಯದ ಅಧ್ಯಯನ ಯಾವತ್ತೂ ಪ್ರಸ್ತುತ ಎಂದರು. ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಡಾ. ಉದಯ್‌ ಕುಮಾರ್‌ ಎಂ.ಎ ಹಾಗೂ  ಮಡಿಕೇರಿಯ ಫೀಲ್ಡ್‌ ಮಾರ್ಷಲ್‌ ಕೆ.ಎಂ ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಡಾ. ಜಗತ್‌ ತಿಮ್ಮಯ್ಯ ಸಿ ಕಾರ್ಯಕ್ರಮಕ್ಕೆ ಶುಭಕೋರಿದರು.

ಇದು ಮಂಗಳೂರು ವಿಶ್ವವಿದ್ಯಾನಿಲಯದ ಅಡಿಯಲ್ಲಿ ಹಿಂದಿ ವಿಭಾಗ ನಡೆಸಿದ ಮೊದಲ ರಾಷ್ಟ್ರ ಮಟ್ಟದ ವೆಬಿನಾರ್‌ ಆಗಿದೆ. ವಿಶ್ವವಿದ್ಯಾನಿಲಯ ಕಾಲೇಜಿನ ಸ್ನಾತಕೋತ್ತರ ವಿಭಾಗದ ಸಂಯೋಜಕಿ ಡಾ. ಸುಮಾ ಟಿ. ರೋಡನ್ನವರ್‌, ಸ್ನಾತಕ ವಿಭಾಗದ ಮುಖ್ಯಸ್ಥೆ ಡಾ. ನಾಗರತ್ನ ಎನ್‌. ರಾವ್‌, ಫೀಲ್ಡ್‌ ಮಾರ್ಷಲ್‌ ಕೆ.ಎಂ ಕಾರ್ಯಪ್ಪ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ ಹೆಗ್ಡೆ, ಸಹ ಪ್ರಾಧ್ಯಾಪಕ ಬಿಸ್ತಪ್ಪ ತಲ್ವಾರ್‌ ಕಾರ್ಯಕ್ರಮ ನಡೆಸಿಕೊಟ್ಟರು.