ಮಂಗಳೂರು:- ಸಿಒಡಿಪಿ (ರಿ) ಸರ್ಕಾರೇತರ ಸಂಸ್ಥೆ ಮಂಗಳೂರು ಮತ್ತು ಸ್ಪರ್ಶ ಯೋಜನೆಯ ವತಿಯಿಂದ  ಶಕ್ತಿನಗರ ಚರ್ಚ್‍ನ ಜನರಿಗೆ ದಿನಾಂಕ 28.07.2020 ರಂದು ಕ್ಯಾನ್ಸರ್ ಮತ್ತು ಕೊರೋನಾ ರೋಗದ ಬಗ್ಗೆ ಜಾಗೃತಿ ಮತ್ತು ಆಹಾರ ವಿತರಣಾ ಕಾರ್ಯಕ್ರಮವನ್ನು ಶಕ್ತಿನಗರದ ಮದರ್ ಆಫ್ ಗೋಡ್  ದೇವಾಲಯದಲ್ಲಿ ಆಯೋಜಿಸಲಾಯಿತು.

ಶಕ್ತಿನಗರ ಚರ್ಚ್‍ನ ಧರ್ಮಗುರುಗಳಾದ ಫಾ| ಜೆರಾಲ್ಡ್ ಡಿ ಸೋಜರವರು ಆರೋಗ್ಯ ಕಾಪಾಡುವ ಬಗ್ಗೆ ಸಲಹೆ ನೀಡಿ, ನಮ್ಮೆಲ್ಲರ ಆರೋಗ್ಯಕ್ಕೆ ನಾವೇ ಹೊಣೆಗಾರರು ಹಾಗೂ ಆರೋಗ್ಯವೇ ಭಾಗ್ಯ ಎಂದು ಮನವರಿಕೆ ಮಾಡಿದರು.

ಸಿಒಡಿಪಿ ಸಂಸ್ಥೆಯ ನಿರ್ದೇಶಕರಾದ ಫಾ| ಓಸ್ವಲ್ಡ್ ಮೊಂತೇರೊ ನೆರೆದಂತಹ ಎಲ್ಲರನ್ನೂ ಸ್ವಾಗತಿಸಿದರು.  ಇವರು ತಮ್ಮ ಸ್ವಾಗತ ಭಾಷಣದಲ್ಲಿ ಕ್ಯಾನ್ಸರ್ ಕಾಯಿಲೆ, ಅದನ್ನು ತಡೆಗಟ್ಟುವುದು, ಚಿಕಿತ್ಸೆ, ರೋಗಿಗಳಿಗೆ ಆತ್ಮವಿಶ್ವಾಸ ತುಂಬುವ ಬಗ್ಗೆ ಹಾಗೂ ಪ್ರಾಥಮಿಕ ಹಂತದಲ್ಲಿ ಚಿಕಿತ್ಸೆ ಪಡೆಯುವುದರ ಬಗ್ಗೆ ವಿವರಿಸಿದರು. ಸಾವಯವ ತರಕಾರಿ ಹಾಗೂ ಪೌಷ್ಠಿಕ ಆಹಾರ ಉಪಯೋಗಿಸುವುದರಿಂದ ಆರೋಗ್ಯಕರವಾದ ಜೀವನ ಸಾಗಿಸಬಹುದು ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಸಿ.ಒ.ಡಿ.ಪಿ ಸಂಸ್ಥೆಯ ಸ್ಪರ್ಶ ಯೋಜನೆಯ ಸಂಯೋಜಕಿಯಾದ  ಶಿಲ್ಪ ರೈನಾ ಡಿ ಸೋಜರವರು ಕೋವಿಡ್ ರೋಗದ ಬಗ್ಗೆ ಜಾಗೃತಿ ನೀಡಿ, ಮುಂಜಾಗ್ರತಾ ಕ್ರಮವಾಗಿ ಕೆಲವು ಸೂತ್ರಗಳನ್ನು ಆಳವಡಿಸಿ, ಈ ರೋಗವನ್ನು ದೂರವಾಗಿಸಲು ಸಾಧ್ಯವೆಂದು ತಿಳಿಸಿದರು.  

ಈ ಸಂದರ್ಭದಲ್ಲಿ ಸಿಒಡಿಪಿ ಸಂಸ್ಥೆಯ ವತಿಯಿಂದ 30 ಬಡ ಕುಟುಂಬಗಳಿಗೆ ಆಹಾರದ  ಪೊಟ್ಟಣಗಳನ್ನು ವಿತರಿಸಲಾಯಿತು.