ಮಂಗಳೂರು :  ಆಗಸ್ಟ್ 15 ರ ಸ್ವಾತಂತ್ರೋತ್ಸವ ಆಚರಣೆ ಕುರಿತು ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿ ರೂಪ ಇವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆಯನ್ನು ಏರ್ಪಡಿಸಲಾಗಿದ್ದು, ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಸ್ವಾತಂತ್ರೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಕರೆ ನೀಡಿದರು. ಪೂರ್ವಭಾವಿ ಕವಾಯತು ಅಭ್ಯಾಸ ಮಾಡಲು ಆಗಸ್ಟ್ 11, 12, 13 ನೇ ದಿನಾಂಕವನ್ನು ನಿಗಧಿ ಮಾಡಲಾಗಿದ್ದು, ಈ ಕವಾಯತು ಪೋಲಿಸ್ ಇಲಾಖೆಯ ಮುಂದಾಳತ್ವದಲ್ಲಿ ಸೇವಾದಳ, ಸ್ಕೌಟ್ಸ್, ಗೈಡ್ಸ್, ಅರಣ್ಯ, ಅಗ್ನಿ ಶಾಮಕ ದಳ ಹಾಗೂ ಶಾಲಾ ಕಾಲೇಜುಗಳ ಉಪಸ್ಥಿತಿಯೊಂದಿಗೆ ನಡೆಸಲು ಸೂಚಿಸಿದರು. ಈ ಸಂಧರ್ಭದಲ್ಲಿ ಉಪಸ್ಥಿತರಿರುವ ಎಲ್ಲರಿಗೂ ಬೆಳಗಿನ ಉಪಾಹಾರವನ್ನು ನೀಡಲು ಪ್ರಾದೇಶಿಕ ಸಾರಿಗೆ ಇಲಾಖೆ, ವಾಣಿಜ್ಯ ತೆರಿಗೆ ಇಲಾಖೆ ಹಾಗೂ ಅಬಕಾರಿ ಇಲಾಖೆಯವರು ವಹಿಸಿಕೊಳ್ಳುವಂತೆ ಕರೆ ನೀಡಿದರು. ಸ್ವಾತಂತ್ರೋತ್ಸವ ದಿನದಂದು ಕಾರ್ಯಕ್ರಮ ಆರಂಭವಾಗುವ ಮುಂಚೆ ಶಿಕ್ಷಣ ಇಲಾಖೆ ವತಿಯಿಂದ ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆ ಗಾಯನವನ್ನು ಏರ್ಪಡಿಸುವಂತೆ ಸೂಚನೆ ನೀಡಿದರು. ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯಿಂದ  ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯಿಂದ ಓ ಆರ್ ಎಸ್ ಹಾಗೂ ಮಕ್ಕಳಿಗೆ ಹಣ್ಣಿನ ಪಾನೀಯವನ್ನು ಒದಗಿಸುವಂತೆ ಕೋರಿದರು. ಧಾರ್ಮಿಕ ದತ್ತಿ ಇಲಾಖೆಯಿಂದ ಸ್ವಾತಂತ್ರೋತ್ಸವ ದಿನದಂದು ಸಿಹಿ ತಿಂಡಿ ವಿತರಿಸಲು ಕ್ರಮ ಕೈಗೊಳ್ಳುವಂತೆ ಸಹಾಯಕ ಆಯುಕ್ತರಿಗೆ ಸೂಚಿಸಿದರು. ಈ ಸಂಧರ್ಭದಲ್ಲಿ ಸಾಂಸ್ಕೃತಿಕ, ವೇಧಿಕೆ, ಹಾಗೂ ತುರ್ತು ಚಿಕಿತ್ಸಾ ಸಮಿತಿಗಳನ್ನು ರಚಿಸಲಾಯಿತು.
ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ದಿ ಕೋಶದ ಅಧಿಕಾರಿ ಪ್ರಸನ್ನ, ಮಂಗಳೂರು ಮಹಾನಗರ ಪಾಲಿಕೆಯ ಜಂಟಿ ಆಯುಕ್ತರಾದ ಗಾಯಿತ್ರಿ ಹಾಗೂ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.