ಶುಕ್ರವಾರ ದಿವಸ....

ಬೆಳಿಗ್ಗೆ ಏಳುವಾಗ ಪಿಲಾತನಿಗೆ ಏನೋ ಒಂದು ತರಹ ಜೀವದಲ್ಲಿ ಕಂಪನವಾಯಿತು. ಪಿಲಾತ ಆಚೆ ಈಚೆ ನೋಡತೊಡಗಿದ. ಅವನ ಹೆಂಡತಿ ಗಾಢ ನಿದ್ದೆಯಿಲ್ಲಿದ್ದಳು. ಪಿಲಾತನ ಹೃದಯಬಡಿತ ಹೆಚ್ಚಾಗತೊಡಗಿತು. ಮುಖದ ಮೇಲೆ ಬೆವರ ಹನಿಗಳು ಪುಟಿದು ಬಂತು. ಪಿಲಾತ ಹೆದರಿ ಹೋದ. ಫಕ್ಕನೆ ವಾಲಿ ಹೆಂಡತಿಯ ಕಾಲನ್ನು ಹಿಡಿದ. ತಕ್ಷಣವೇ ಅವಳು ಎಚ್ಚೆತ್ತಳು. ತನ್ನ ಗಂಡನ ಮುಖದಲ್ಲಿ ಬೆವರ ಹನಿಗಳನ್ನು ನೋಡಿ ಗಾಬರಿಯಾದಳು. ಇದರ ಮುಂಚೆ ಯಾವಾಗಲೂ ಪಿಲಾತನ ಮುಖದಲ್ಲಿ ಬೆವರ ಹನಿಗಳು ಬರಲಿಲ್ಲ.

“ಏನಾಯ್ತು, ಹುಷಾರಿಲ್ಲವೇ?” ಹೆಂಡತಿ ಕೇಳಿದಳು.

“ಎನೋ ಒಂದು ತರಹ ಜೀವದಲ್ಲಿ ಕಂಪನ ಶುರುವಾಗಿದೆ.... ಏನೋ ಹೃದಯ ಬಡಿತ ಕೂಡಾ ಹೆಚ್ಚಾಗಿದೆ...” ಎಂದನು ಪಿಲಾತ.

“ಹಾಗಾದರೆ ವೈದ್ಯನನ್ನು ಕರೆಯುತ್ತೇನೆ” ಎಂದು ಹೇಳಿ ಮಂಚದ ಪಕ್ಕದಲ್ಲಿದ್ದ ಗಂಟೆಯನ್ನು ಬಾರಿಸಿದಳು.

ಗಂಟೆಯ ಶಬ್ಧ ಕೇಳಿ ಒಬ್ಬ ಹುಡುಗ ಓಡಿ ಓಡಿ ಬಂದ. ತನ್ನ ಶಿರವನ್ನು ಬಾಗಿಸಿ ನಿಂತ.

“ಬೇಗನೇ ಹೋಗಿ ವೈದ್ಯರನ್ನು ಕರೆದು ಬಾ” ಅವಳು ಹೇಳಿದಳು.

ಅಷ್ಟರಲ್ಲಿ ಹೊರಗೆ ತುಂಬಾ ಗಲಾಟೆ ಆಗುವ ಶಬ್ಧ ಕಿವಿಗೆ ಬಿತ್ತು. ಪಿಲಾತ ಎದ್ದು ಮೆಲ್ಲನೆ ಹೋಗಿ ಕಿಟಿಕಿಯ ಹತ್ತಿರ ನಿಂತು ಹೊರಗೆ ನೋಡಿದ....

ಅವನ ಅರಮನೆಯತ್ತ ಬಾರಿ ಜನರ ಗುಂಪು ಬರುತ್ತಿತ್ತು.... ಅವರ ಮಧ್ಯದಲ್ಲಿ ಯೇಸು ಕ್ರಿಸ್ತನನ್ನು ಗುಲಾಮನಂತೆ ಕೈಗಳನ್ನು ಕಟ್ಟಿ, ಎಳೆದು ತರುವುದು ನೋಡಿದ ಪಿಲಾತ. ಮತ್ತೇ ಪಿಲಾತ ಚುರುಕಾದ. ಅವನ ಎಲ್ಲಾ ಕಂಪನ ಮಾಯವಾಯಿತು. ಮುಖದ ಮೇಲೆ ಪುಟಿದಿದ್ದ ಬೆವರ ಹನಿಗಳು ಕೂಡಾ ಮಾಯವಾಗಿತ್ತು.

“ನೋಡು ಹೊರಗೆ, ಯೇಸುವನ್ನುಎಳೆದು ತರುತ್ತಾರೆ” ಹೆಂಡತಿಗೆ ಹೇಳಿದ.

ಹೆಂಡತಿ ಜುಲಿಯಾನಾ ಕಿಟಿಕಿಯ ಹತ್ತಿರ ಹೋಗಿ ಹೊರಗೆ ನೋಡಿದಳು..... ಜನರ ಗುಂಪು ಹಾಗೂ ಯೇಸುವನ್ನು ಎಳೆದು ತರುವುದು ನೋಡಿ ಜುಲಿಯಾನಾಗೆ ಕಸಿವಿಸಿಯಾಯಿತು.

“ಮೊನ್ನೆ ತನಕ ಜನರು ಅವರ ಹಿಂದೆ ಹಿಂದೆ ಹೋಗುತ್ತಿದ್ದರು.... ಅವರ ಪ್ರಸಂಗವನ್ನು ಕೇಳುತ್ತಿದ್ದರು. ಈಗ ಏನಾಯ್ತು? ಏನು ತಪ್ಪು ಮಾಡಿದ್ದಾನೆ ಯೇಸು?” ಜುಲಿಯಾನ ಪಿಲಾತನಿಗೆ ಹೇಳಿದಳು.

“ಈ ಯೇಹೂದಿಯರು ಹಾಗೆನೇ.... ಈಗ ನನ್ನತ್ರ ತಂದು ನ್ಯಾಯ ಕೇಳುತ್ತಾರೆ ನೋಡು” ಹೇಳಿದ ಪಿಲಾತ.

ಮತ್ತೊಂದು ನಿಮಿಷದಲ್ಲಿ ಖೈಪಾಸ ಎಂಬ ತುಂಡು ರಾಜ ಪಿಲಾತನು ಇದ್ದಲ್ಲಿಗೆ ಓಡೋಡಿ ಬಂದ. ಶಿರವನ್ನು ಬಾಗಿಸಿ ಪಿಲಾತನಿಗೆ ವಂದಿಸಿದ.

“ಏನಿದು ಗಲಾಟೆ – ಆ ಯೇಸುವನ್ನು ಯಾಕೆ ಕಟ್ಟಿದ್ದೀರಿ?” ಪಿಲಾತ ಕೇಳಿದ.

“ಅವನು ದೇವರ ಮಗನಂತೆ....” ಖೈಪಾಸ ಹೇಳಿದ.

“ಏನು, ಯೇಸು ದೇವರ ಮಗ! ಯಾರು ಹೇಳಿದ್ದು?”

“ಮತ್ತೆ ಯಾರು? ಖುದ್ದಾಗಿ ನಾನು ಅವರತ್ರ ಹೋಗಿ ಕೇಳಿದ್ದೆ” ಎಂದ ಖೈಪಾಸ.

“ಎಂದರೇ ಯೇಸುವೇ ಹೇಳಿದ್ದಾನೆ... ದೇವರ ಮಗನೆಂದು.....”

“ಹೌದು ಸ್ವಾಮಿ – ಇದು ದೇವನಿಂದನೆ ಅಲ್ಲವೆ? ಅದಕ್ಕೋಸ್ಕರ ಅವನನ್ನು ಬಂಧಿಸಿ ತಂದಿದ್ದೇವೆ. ನೀವೇ ಅವರಿಗೆ ಮರಣ ದಂಡನೆ ಕೊಡಬೇಕು. ಕಳೆದ ಮೂರು ವರುಷದಿಂದ ಸಾವಿರಾರು ಜನರನ್ನು ತನ್ನತ್ರ ಎಳೆದಿದ್ದಾನೆ.”

“ಅದು ಸರಿ, ಆದರೆ ಅವನು ಯಾರಿಗೂ ಅನ್ಯಾಯ ಮಾಡಲಿಲ್ಲವಲ್ಲ?”

“ಯಾಕೆ ಮಾಡಲಿಲ್ಲ? ದೇವಾಲಯದಲ್ಲಿ, ದೇವರಿಗೆ ಬಲಿ ಅರ್ಪಿಸುವ ಪ್ರಾಣಿಗಳ ವ್ಯಾಪಾರ ಮಾಡುವವರಿಗೆ ಏಟು ಕೊಟ್ಟು ಹೊರಗೋಡಿಸಿದ್ದಾನೆ.... ಅವರ ಹೊಟ್ಟೆಪಾಡಿಗಾಗಿ ವ್ಯಾಪಾರ ಮಾಡುತ್ತಿದ್ದರು....”

“ಹೊಟ್ಟೆಪಾಡಿಗಾಗಿ ಸರಿ. ಆದರೇ ದೇವಾಲಯ ಒಂದು ಪವಿತ್ರ ಸ್ಥಳ. ಅಲ್ಲಿ ವ್ಯಾಪಾರ ಮಾಡುವುದು ತಪ್ಪು ಎಂದು ನಿಮಗೆ ಗೊತ್ತಿಲ್ಲವೇ?” ಪಿಲಾತ ಕೇಳಿದ ಪ್ರಶ್ನೆಗೆ ಉತ್ತರ ಇರಲಿಲಲ್ಲ ಖೈಪಾಸನತ್ರ.

ಆಗಲೇ ಪಿಲಾತನ ಸಭಾಂಗಣದಲ್ಲಿ ಸಾವಿರಾರು ಜನರು ಕೂಡಿದ್ದರು.

“ಓ ದೊರೆ, ಕೆಳಗೆ ಬಂದು ನಮಗೆ ನ್ಯಾಯ ಕೊಡಿ” ಎಂದು ಜನರು ಬೊಬ್ಬಿಡುತ್ತಿದ್ದರು.

“ಸರಿ, ನಾನು ಬರುತ್ತೇನೆ. ನೀನು ಕೆಳಗೆ ಹೋಗು” ಖೈಪಾಸನಿಗೆ ಕೆಳಗೆ ಕಳುಹಿಸಿದ ಪಿಲಾತ. ಸ್ವಲ್ಪ ತಡೆದು ಪಿಲಾತ ಕೂಡ ತಮ್ಮ ಸಭಾಂಗಣಕ್ಕೆ ಹೋದರು.

ಕಿಕ್ಕಿರಿದ ಜನ ಸಂದಣಿ ನೋಡಿ ಪಿಲಾತ ಆಶ್ಚರ್ಯಗೊಂಡ. ತಮ್ಮ ಆಸನದಲ್ಲಿ ಆಸೀನನಾದ ಪಿಲಾತ.

“ಪ್ರಿಯ ಬಂಧುಗಳೇ, ನಮ್ಮ ರೋಮನ್ ದೊರೆಯವರು ಈಗ ಯೇಸು ಬಗ್ಗೆ ನ್ಯಾಯ ಮಾಡುವರು. ಸ್ವಲ್ಪ ತಾಳ್ಮೆಯಿಂದ ಇರಿ” ಎಂದು ಖೈಪಾಸ ಹೇಳಿದ.

ಎಲ್ಲರು ಬಾಯಿ ಮುಚ್ಚಿಕೊಂಡು ನಿಂತರು.

“ಯೇಸುವನ್ನು ನನ್ನತ್ರ ತನ್ನಿ” ಎಂದು ಪಿಲಾತ ಹೇಳಿದ

ಇಬ್ಬರು ಶಿಪಾಯಿಗಳು ಯೇಸುವನ್ನು ಜೋರಾಗಿ ತಳ್ಳಿದರು.... ಮೊದಲೇ ಹೊಟ್ಟೆ ಖಾಲಿ ಇದ್ದರಿಂದ ನಿತ್ರಾಣವಾಗಿದ್ದ ಯೇಸು ಬೀಳಲಿಕ್ಕಿದ್ದರು.

“ಯಾಕೆ ದೂಡುತ್ತೀರ...? ಯಾಕೆ ಎಳೆಯುತ್ತೀರ? ನಿಮ್ಮ ಹಾಗೆ ಮನುಷ್ಯನಲ್ಲವೇ? ಪಿಲಾತ ಕೇಳಿದ.

ಯೇಸು ನಿಧಾನವಾಗಿ ಬಂದು ಪಿಲಾತನ ಎದುರಿಗೆ ನಿಂತ.

ಪಿಲಾತ ಯೇಸುವನ್ನು ಕೆಳಗಿನಿಂದ ಮೇಲೆ ತನಕ ನೋಡಿದ. ಒಬ್ಬ ನಿರ್ದೊಷಿ ವ್ಯಕ್ತಿ ಯೇಸು ಎಂದು ಪಿಲಾತನಿಗೆ ಖಚಿತವಾಯಿತು. ಆದರೆ ನ್ಯಾಯ ಕೇಳಿ ಜನರು ಮತ್ತು ಅವರ ಗುರುಗಳು ಯೇಸುವನ್ನು ಬಂಧಿಸಿ ಹಾಗೂ ನಿಂದಿಸಿ ತಂದಿದ್ದಾರೆ.

ಪಿಲಾತ ಯೇಸುವಿನ ಕಣ್ಣಲ್ಲಿ ನೋಡಿ ಕೇಳಿದ “ನೀನು ದೇವರ ಮಗನೇನು?”

ಯೇಸು ಪಿಲಾತನತ್ರ ದೃಷ್ಟಿ ಹಾಯಿಸಿದ... “ಇದು ನೀನಾಗಿ ಕೇಳುತ್ತಿದ್ದಿಯಾ, ಅಥವಾ ಯಾರಾದ್ರೂ ಹೇಳಿದ್ದಾರಾ?’

ಯೇಸುವಿನ ಪ್ರಶ್ನೆ ಕೇಳಿ ಪಿಲಾತ ಏನೂ ಮಾತಾಡ್ಲಿಲ್ಲ.

“ನೋಡಿ, ಯೇಸು ನನ್ನ ಪ್ರಕಾರ ಹೇಳುವುದಾದರೆ ನಿರ್ದೊಷಿಯಾಗಿದ್ದಾನೆ.... ಅವನು ಏನು ತಪ್ಪು ಮಾಡಲಿಲ್ಲ. ಅವನನ್ನು ಬಿಡುತ್ತೇನೆ....” ಎಂದು ಹೇಳುವಾಗಲೇ ತುಂಬಿದ ಜನರು ಬೊಬ್ಬೆ ಹೊಡೆದರು.

“ಯೇಸುವನ್ನು ಶಿಕ್ಷಿಸಿ. ಅವ ದೇವನಿಂದನೆ ಮಾಡಿದ್ದಾನೆ..... ಅವನನ್ನು ಶಿಲುಬೆಗೇರಿಸಿ....” ಎಂದು ಬೊಬ್ಬೆ ಹೊಡೆದರು. ಕೆಲವು ಧಾರ್ಮಿಕ ಗುರುಗಳು ಜನರನ್ನು ಯೇಸುವಿನ ವಿರೋಧ ಪ್ರಚೋದಿಸುತ್ತಿದ್ದರು.

ಈ ನಡುವಿನಲ್ಲಿ ಪಿಲಾತನ ಹೆಂಡತಿ ಒಬ್ಬ ಹುಡುಗನತ್ರ ಒಂದು ಚೀಟಿ ಬರೆದು ಪಿಲಾತನಿಗೆ ಕಳುಹಿಸಿದಳು.

“ಯೇಸುವಿನ ತಂಟೆಗೆ ಹೋಗಬೇಡಿ. ಅವನಿಂದ ಕನಸಿನಲ್ಲಿ ತುಂಬಾ ನೊಂದಿದ್ದೇನೆ...” ಎಂದು ಬರಹವಿತ್ತು.

ಪಿಲಾತ ಏನು ಮಾಡುವುದು ಎಂದು ಹೋಚಿಸುತ್ತಾ “ಯೇಸು ನಿಮ್ಮ ರಾಜನಲ್ಲವೇ? ಏನೂ ಪಾಪ ಮಾಡದ ಮನುಷ್ಯನನ್ನು ಶಿಕ್ಷಿಸುವುದು ತಪ್ಪು. ಆದರೇ ನಿಮ್ಮ ತೃಪ್ತಿಗೋಸ್ಕರ ಏಟು ಕೊಟ್ಟು ಬಿಡುಗಡೆ ಮಾಡುತ್ತೇನೆ...” ಹೇಳಿದ ಪಿಲಾತ.

“ಯೇಸು ನಮ್ಮ ರಾಜನಲ್ಲ. ನಮ್ಮ ರಾಜ ನೀವು. ನಿಮ್ಮನ್ನು ಬಿಟ್ಟು ಬೇರ್ಯಾರೂ ರಾಜನಿಲ್ಲ! ಯೇಸುವನ್ನು ಶಿಲುಬೆಗೇರಿಸಿ....” ಎಂದು ಬೊಬ್ಬೆ ಹಾಕಿದರು.

ಜನರ ಮುಂದೆ ಪಿಲಾತ ಹತಾಶನಾದ. ಒಬ್ಬ ಶಿಪಾಯಿ ಹತ್ರ ನೀರು ತರಲಿಕ್ಕೆ ಹೇಳಿದ....

“ನಿಮ್ಮ ಇಚ್ಛೆಯ ಪ್ರಕಾರ ಯೇಸುವನ್ನು ಶಿಲುಬೇಗೆ ಏರಿಸುವುದು ಕೆಲಸ ನೀವೇ ಮಾಡಿ. ಪಾಪರಹಿತ ಮನುಷ್ಯನನ್ನು ಶಿಕ್ಷಿಸುವುದು ನನ್ನ ಕೆಲಸವಲ್ಲ. ಈ ಪಾಪಕ್ಕೆ ನಾನು ಜವಾಬ್ದಾರನಲ್ಲ.... ಎಂದು ಶಿಪಾಯಿ ತಂದ ನೀರಿನಿಂದ ಕೈ ತೊಳೆದ.

“ಯೇಸುವಿಗೆ ಕೊಂದ ಪಾಪದ ಕರ್ಮ ನಮ್ಮ ಮತ್ತು ನಮ್ಮ ಕುಟುಂಬದ ಮೇಲೆರಿರಲಿ!” ಜನರು ಬೊಬ್ಬೆ ಹಾಕಿದರು.

ಪಿಲಾತ ತಮ್ಮ ಶಿಪಾಯಿಗಳಿಗೆ ಯೇಸುವನ್ನು ಒಪ್ಪಿಸಿ ಸಭಾಂಗಣದಿಂದ ಎದ್ದು ಹೋದ. ಅವನ ಮನಸ್ಸು ದುಖಿಸುತ್ತಿತ್ತು. ಯೇಸುವನ್ನು ಶಿಕ್ಷಿಸದೆ ಬಿಟ್ಟುಬಿಡುವ ಅಧಿಕಾರ ಪಿಲಾತನ ಕೈಯಲ್ಲಿತ್ತು. ಆದರೆ ಅಧಿಕಾರದ ದುರಾಸೆ ಮತ್ತು ಪ್ರಜೆಗಳ ಒತ್ತಡ ಅವನ ಮೇಲೆ ಪರಿಣಾಮ ಬೀರಿತ್ತು.

ಪಿಲಾತನ ಆದೇಶದ ಪ್ರಕಾರ ಶಿಪಾಯಿಗಳು ಯೇಸುವನ್ನು ಶಿಲುಬೆಗೇರಿಸಲು ಒಂದು ಮರದ ಶಿಲುಬೆಯನ್ನು ತಂದು ಯೇಸುವಿನ ಹೆಗಲ ಮೇಲೆ ಇಟ್ಟು ‘ಗೊಲ್ಗೊತ್ತ’ ಬೆಟ್ಟಕ್ಕೆ ಕೊಂಡೊಯ್ದರು.

ಯೇಸುವಿನ ದಯಾನಿಯಾ ಸ್ಥಿತಿಯನ್ನು ನೋಡಿ ಕೇವಲ ಸ್ತ್ರೀಯರು ಮಾತ್ರ ದುಖಿಸುತ್ತಿದ್ದರು. ಅವರ ಶಿಷ್ಯರಲ್ಲಿ ಇಬ್ಬರು ಮಾತ್ರ ದೂರದಿಂದ ಯೇಸುವಿನ ಹಿಂದೆ ನಡೆಯುತ್ತಿದ್ದರು.

ಸತತ ನಾಲ್ಕು ಘಂಟೆ ನಡೆದು, ಬಿದ್ದು, ಎದ್ದು ಗೊಲ್ಗೊತ್ತಾಗೆ ತಲುಪಿತಾದ ಸೂರ್ಯನ ಬಿಸಿಲು ನೆತ್ತಿಯನ್ನು ಸುಡುತ್ತಿದ್ದವು. ಯಾವುದೇ ಕನಿಕರ ಇಲ್ಲದೆ ದೊಡ್ಡ ದೊಡ್ಡ  ಮೊಳೆಗಳನ್ನ ಯೇಸುವಿನ ಕೈತೋಳಕ್ಕೆ ಹಾಗೂ ಪಾದಕ್ಕೆ ಹೊಡೆದು ಶಿಲುಬೆಯ ಮೇಲೆ ತೂಗಡಿಸಿ ಬಿಟ್ಟರು.

ಸುಮಾರು ಒಂದೆರಡು ಘಂಟೆ ನಂತರ ತಮಗೆ ಹಿಂಸೆ ಕೊಟ್ಟ ಎಲ್ಲರಿಗೂ ಕ್ಷಮಿಸು ದೇವರೇ ಎಂದು ತಮ್ಮ ಪ್ರಾಣಪಕ್ಷಿಯನ್ನು ದೇವರಿಗೆ ಅರ್ಪಿಸಿದ ಯೇಸು. ಆ ಸಮಯದಲ್ಲಿ ಇಡೀ ಭೂಲೋಕದಲ್ಲಿ ಅತೀ ಬೇಗನೇ ಕತ್ತಲೆಯಾಯಿತು. ದೇವಾಲಯದ ಪರದೆ ಹರಿದು ಹೋಯಿತು. ಭೂಮಿ ಕಂಪಿಸಿತು.

ಇದೆಲ್ಲ ನೋಡಿದ ಕೆಲವರು ಹೇಳತೊಡಗಿದರು “ಯೇಸು ನಿಜವಾಗಿಯೂ ದೇವ ಪುತ್ರನಾಗಿದ್ದ!”

ಹೌದು ಯೇಸು ಭೂಲೋಕಕ್ಕೆ ಮನುಷ್ಯ ರೂಪದಲ್ಲಿ ಬಂದಿದ್ದ ದೇವಪುತ್ರ. ಮನುಷ್ಯನಿಗೆ ಪಾಪದಿಂದ ಮುಕ್ತ ಮಾಡುವಗೋಸ್ಕರ ಬಂದಿದ್ದರು.