ದೂರದ ನೆಂಟರು ನಿಲ್ಲಲಾರರು, ಭಾರವಾಗಲಾರರು. ಅಂದರೆ ದೂರದ ಬೆಟ್ಟ ನುಣ್ಣಗೆ ಹೇಗೋ ಹಾಗೆಯೇ ಎಂಬ ಅರ್ಥವನ್ನು ಕಲ್ಪಿಸಬಹುದಾದರೂ, ದೂರದ ಊರಿನಿಂದ ನೆಂಟರು ಬಂದರೆ ಅವರು ಘನತೆಯುಳ್ಳವರು, ಹತ್ತಿರದ ಊರುಗಳಿಂದ ಬರುವ ನೆಂಟರು ಸ್ವಲ್ಪ ಅಂದ್ರೆ ಅವ್ರು ಇಲ್ಲಿಯವ್ರೇ ಎಂಬ ಭಾವನೆ ತಲೆತಲಾಂತರಗಳಿಂದ ತಲೆಯಲ್ಲಿ ತುಂಬಿದ್ದ ವಿಷಯವೇ ಆಗಿತ್ತು. ಬಹುಶಃ ಈಗ ಆ ಭಾವನೆಗಳು ಬದಲಾಗಿ ಹತ್ತಿರದವನೇ ನೆಂಟ, ಬಂಧು, ಆಪ್ತರು, ಮಿತ್ರರು ಎಂಬೆಲ್ಲ ಮಾತುಗಳು ಕೇಳಿಬರುತ್ತಿವೆ. ಜೀವನದ ಹಾದಿ ಕ್ರಮಿಸಿದಂತೆಲ್ಲಾ ನಾವು ಪ್ರಬುದ್ಧರಾಗುತ್ತಿದ್ದೇವೆ ಎಂದು ಹೇಳಿಕೊಂಡರೂ ಮನಸ್ಸುಗಳು ಕುಬ್ಜಗೊಳ್ಳುತ್ತಿವೆಯೆಂದೇ ಹೇಳಬಹುದು. ಬಂಧುತ್ವದ ಪರಿಚಯವೇ ಇರದ ಇಂದಿನ ತಲೆಮಾರುಗಳ ತುಂಬಾ ಮಾತು - ಕತೆ ಕಡಿಮೆಯಾಗಿ ಆದಾಯ ಗಳಿಸುವ ಪ್ರವೃತ್ತಿಗಳು ಹೆಚ್ಚಾಗಿವೆ.

ಮಕ್ಕಳಿಗೆ ಪ್ರೀತಿ, ನಮ್ಮ ಹೃದಯ ಸಾಮಿಪ್ಯ ನೀಡುವ ಬದಲು ಯಾಂತ್ರೀಕೃತ ಬದುಕಿಗೆ ನಾವೇ ಒಗ್ಗೂಡಿಸುತ್ತಾ ಬಂದಿದ್ದೇವೆ. ಇನ್ನು ಕೆಲವರು ಬದಲಿ ವ್ಯವಸ್ಥೆ ಇಲ್ಲದೇ ಅದಕ್ಕೆ ತಮ್ಮನ್ನು ಒಪ್ಪಿಸಿಕೊಂಡು ಕೃತಾರ್ಥರಾಗುತ್ತಿದ್ದಾರೆ.  ಬಾಹ್ಯದ ಅರಿವಿನಿಂದ ಆಂತರಿಕ ತಿಳಿವಿಗೆ ಹಾದಿಯು ದೊರಕದೇ ಬರಿಯ ಕೋಪ, ಸಿಟ್ಟು, ಅಸಹನೆ, ಅಪನಂಬಿಕೆಗಳಿಗೆ ದಾಸರಾಗುತ್ತಾ ಬರುತ್ತಿರುವುದು ಶೋಚನೀಯದ ಸಂಗತಿಯೇ ಆಗಿದೆ.

ಕರೆದಾಗ "ಓ" ಎನ್ನದೇ ವಿಧಿಯಿಲ್ಲ. ಕೆಲಸ ಸಾಗಬೇಕಾದರೆ ಕರೆಸಿಕೊಂಡವ ಸುಮ್ಮನೆ ಇದ್ದರೆ ಕರೆದವ ತನ್ನ ಕೆಲಸ ಬಿಟ್ಟು ಹುಡುಕಲಾರಂಭಿಸುತ್ತಾನೆ. ಅತ್ತ ತನ್ನ ಕೆಲಸವೂ ಸಾಗದು. ಇತ್ತ ಕರೆಸಿಕೊಂಡವ ಪದ್ಯ ಹಾಕಿಕೊಂಡು ಗುಣುಗುಟ್ಟುತ್ತಿರುತ್ತಾನೆ. ಆಗಲೇ ದಾರಿ ಯಾವುದಯ್ಯಾ? ಕೆಲಸ ಮಾಡಿಸಲು ದಾರಿಯ ತೋರಯ್ಯಾ ಎಂಬಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಮನುಷ್ಯನಲ್ಲಿರತಕ್ಕ ನಂಬಿಕೆ, ನಡವಳಿಕೆಗಳು ಭದ್ರವಾಗಬೇಕಾದರೆ ತಳಪಾಯದ ಬೇರುಗಳು ವಿಶಾಲವಾಗಿರಬೇಕು. ಹಾಗೂ ಗಟ್ಟಿಯಾಗಿರಬೇಕು. ಮನದಾಳದ ಮಾತುಗಳಿಗೆ ಈ ಬೇರುಗಳು ಅಮೃತಪಾನವನ್ನು ನೀಡುತ್ತವೆ. ಆಗ ಅವುಗಳು ಧನಾತ್ಮಕವಾಗಿ ಬೆಳೆದು ಶ್ರದ್ಧೆ, ಗೇಯತೆ ಗೈಯುತ್ತವೆ.

ದಿನಗಳುರುಳಿದಂತೆ ಬದುಕಿನ ಚಕ್ರಗಳುರುಳುತ್ತವೆ. ಹಗಲು ರಾತ್ರಿಗಳ ಒಂದಕ್ಕೊಂದು ಕೊಂಡಿ ನಿಧಾನವಾಗಿ ಸಾಗುತ್ತಿರುತ್ತವೆ. ಆ ಕೊಂಡಿ ಯಾವಾಗ ಕಳಚಿತೋ ಅಂದು ಬದುಕಿಗೆ ಪೂರ್ಣ ವಿಶ್ರಾಂತಿ ದೊರಕುತ್ತದೆ. ಮಾಯಾಲೋಕದ ಈ ಪ್ರಪಂಚದಲ್ಲಿ  ಜೀವಗಳು ಮಾಯವಾಗುವುದು ಈ ಕಾಯ 

ತನ್ನ ಕಾಯಕ ನಿಲ್ಲಿಸಿದಾಗ. ಬದುಕೆಂಬ ಕಾಯಕ್ಕೆ ವಿಶ್ರಾಂತಿ ದೊರಕದ ಹೊತ್ತು ಅವಿಶ್ರಾಂತವಾಗಿ ದುಡಿಯತೊಡಗುತ್ತದೆ. ನೆಲೆ ನಿಲ್ಲಲು ಹಪಹಪಿಸುವವರಿಗೆ ಉಪ್ಪರಿಗೆ ಮೇಲೆ ಆಸೆಯಾದಂತೆ. ಈ ಆಸೆಯ ಜಾಲ ಎಲ್ಲೆಡೆ ಪಸರಿಸುತ್ತದೆ.

ಮಲ್ಲಿಕಾ ಜೆ ರೈ ಪುತ್ತೂರು