ಮೈಸೂರು: "ಕಾಲೇಜುಗಳನ್ನು ತೆರೆಯುವ ಬಗ್ಗೆ ಕೇಂದ್ರ ಸರ್ಕಾರ ಮತ್ತು ಯುಜಿಸಿಯಿಂದ ಈಗಾಗಲೇ ರಾಜ್ಯಕ್ಕೆ ಮಾರ್ಗಸೂಚಿ ಬಂದಿದೆ. ಈ ಹಿನ್ನೆಲೆಯಲ್ಲಿ ಶೀಘ್ರವೇ ಕಾಲೇಜು ಆರಂಭ ಮಾಡಲಾಗುವುದು" ಎಂದು ಡಿಸಿಎಂ ಡಾ.ಸಿ.ಎನ್. ಅಶ್ವತ್ಥನಾರಾಯಣ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕೇಂದ್ರ ಮತ್ತು ಯುಜಿಸಿಯಿಂದ ರಾಜ್ಯಕ್ಕೆ ಮಾರ್ಗಸೂಚಿ ಬಂದಿದೆ. ಈ ಹಿನ್ನೆಲೆಯಲ್ಲಿ ಮೂಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಆದಷ್ಟು ಬೇಗ ಕಾಲೇಜುಗಳನ್ನು ತೆರೆಯುವ ದಿನಾಂಕವನ್ನು ಪ್ರಕಟಿಸಲಾಗುವುದು" ಎಂದು ತಿಳಿಸಿದರು.

"ಎಲ್ಲಾ ಕಾಲೇಜುಗಳಲ್ಲೂ ಆನ್ ಲೈನ್ ತರಗತಿಗಳು ನಡೆಯುತ್ತಿವೆ. ಆಫ್ ಲೈನ್ ತರಗತಿಗಳು ಆರಂಭವಾಗಬೇಕು ಎಂಬುದು ವಿದ್ಯಾರ್ಥಿಗಳು ಬಯಸುತ್ತಿದ್ದಾರೆ. ಹೀಗಾಗಿ ಶೀಘ್ರದಲ್ಲೇ ಕಾಲೇಜು ಆರಂಭದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು" ಎಂದು ಹೇಳಿದ್ದಾರೆ.