ಕೊರೊನಾದ ಹೊಡೆತದಿಂದ ಎಲ್ಲಾ ಸಂಘ.ಸಂಸ್ಥೆಗಳೂ ಅತಿ ಹೆಚ್ಚು ಪ್ರಮಾಣದಲ್ಲಿ ಅಂತರ ಕಾಪಾಡಿಕೊಳ್ಳಲು ಶ್ರಮಿಸುತ್ತಿವೆ. ಅಂತೆಯೇ ಕಾಪಾಡಿಕೊಳ್ಳದ ಹಲವಾರು ಸಂಘ, ಸಂಸ್ಥೆ, ಇಲಾಖೆಗಳು ಸೀಲ್‍ಡೌನ್ ಆಗಿ ಅನಿವಾರ್ಯವಾಗಿ ದೈನಂದಿನ ಕೆಲಸ ಕಾರ್ಯಗಳಿಂದ ದೂರ ಉಳಿಯುವಂತಾಗಿದೆ. ಅದೇ ರೀತಿ ಅಧಿಕಾರಿಗಳು ಕೂಡಾ ತಮ್ಮ ಕೆಲಸ ಕಾರ್ಯಗಳನ್ನು ಸಾರ್ವಜನಿಕ ಒತ್ತಡ ಇಲ್ಲದೆ ಸಾಮಾಜಿಕ ಅಂತರ ಕಾಪಾಡಿಕೊಂಡು ನಡೆಸುತ್ತಿದ್ದಾರೆ. ಮೇಲ್ಮಟ್ಟದ ಅಧಿಕಾರಿಗಳು, ಕಚೇರಿಗಳು, ಸಾರ್ವಜನಿಕರಿಂದ ಅಂತರ ಕಾಪಾಡಿಕೊಂಡು ಕಾರ್ಯ ನಿರ್ವಹಿಸುತ್ತಿರುವಾಗ ಕೆಳ ಮಟ್ಟದ ಅಧಿಕಾರಿಗಳಿಂದ ಮಾತ್ರ -‘ಸಾಹೇಬರು ಔಟ್‍ಡೋರ್ ಹೋಗಿದ್ದಾರೆ, ಬೇರೆಡ್ಯೂಟಿಯಲ್ಲಿದ್ದಾರೆ, ನಿಮ್ಮ ಕೆಲಸ ವಿಳಂಬವಾಗುತ್ತದೆ, ಕೇಸ್‍ವರ್ಕರ್ ಬಂದಿಲ್ಲ, ರಜೆಯಲ್ಲಿದ್ದಾರೆ, ಬೇರೆ ಕೆಲಸದಲ್ಲಿದ್ದಾರೆ’ ಎಂಬಿತ್ಯಾದಿ ಸಬೂಬುಗಳಿಂದ ವಿದ್ಯಾರ್ಥಿಗಳು, ಹೆತ್ತವರನ್ನು ಅತೀ ಅಗತ್ಯದ ಕೆಲಸಗಳಿಂದ ಅಲೆದಾಡಿಸುತ್ತಿದ್ದಾರೆ. ಆದರೆ ಅದೇ ಸಂದರ್ಭದಲ್ಲಿ ನೂರೈನೂರು ನೀಡಿದರೆ ಬೇಕಿದ್ದ ದಾಖಲೆ ಯಾವುದೇ ರೀತಿಯ ಪೂರಕ ದಾಖಲೆ, ಕ್ರಮಗಳಿಲ್ಲದೆಯೂ ತಕ್ಷಣ/ ಮರುದಿನ/ ಸ್ವತ: ಕೇಳಿದವರ ಮನೆಗೇ ತಲುಪಿಸಲಾಗುತ್ತದೆ. ಹೀಗಾಗಿ ಕಾಂಚಾಂಣಂಕಾರ್ಯ ಸಿದ್ಧಿ ಎನ್ನುವಂತಾಗಿರುವುದು ನಮ್ಮದೇಶಕ್ಕೆ ಒಳಿತೇ? ಯೋಚಿಸಿರಿ. ಸ್ವತ: ಜನರು,ಯುವಕರು ಸಿಡಿದೇಳಬೇಕಾಗಿದೆ.

ಸಾಹೇಬರು ಔಟ್‍ಡೋರ್, ಓಕೆ. ಆದರೆ ಉಳಿದ ಅಧಿಕಾರಿಗಳು, ನೌಕರರು ಏನು ಮಾಡುತ್ತಿದ್ದಾರೆ? ಕಂದಾಯ, ಆರೋಗ್ಯ ಇತ್ಯಾದಿ ಅತೀ ಜರೂರು ಕಾರ್ಯವಾಗ ಬೇಕಿರುವ ಇಲಾಖೆಯ ನೌಕರರು ಅತ್ಯಗತ್ಯವಾಗಿ ಆನ್‍ಲೈನ್‍ನಲ್ಲಿಯೇ ದಾಖಲೆಗಳನ್ನು ನೀಡಲು, ಒಪ್ಪಿಗೆಕೊಡಲು ಸಾಧ್ಯವಿರುವಾಗ ಕೇವಲ ಹಣದಾಸೆಗಾಗಿ/ ಲಂಚಕ್ಕಾಗಿ ಇನ್ನಿಲ್ಲದಂತೆ ಗೋಳು ಹೊಯ್ದುಕೊಳ್ಳುವುದು ಎಷ್ಟರಮಟ್ಟಿಗೆ ಸರಿ? ಮುಂದಿನ ವ್ಯಾಸಂಗ, ಉದ್ಯೋಗ ಇತ್ಯಾದಿಗಳಿಗಾಗಿ ವಾಸದ ದೃಢೀಕರಣ ಪತ್ರ, ಕೃಷಿಕರ ಪಹಣಿ ಪತ್ರ, ಜಾತಿ/ಆದಾಯ ಪ್ರಮಾಣ ಪತ್ರ, ಇತ್ಯಾದಿ ಹಲವಾರು ದೃಢೀಕರಣ ಪತ್ರಗಳು ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಸಂದರ್ಭದಲ್ಲಿ ಅತ್ಯಗತ್ಯವಾಗಿರುತ್ತದೆ.ಇಂತಹ ಎಲ್ಲಾ ಪ್ರಕ್ರಿಯೆಗಳೂ ಬಹಳ ಸುಲಭದಲ್ಲಿ ಆನ್‍ಲೈನ್‍ನಲ್ಲಿ ಸಾಧ್ಯವಿದೆ.ಆದರೆ ಕಂದಾಯ, ಆರೋಗ್ಯಇತ್ಯಾದಿ ವಿಭಾಗದವರು ಕಡ್ಡಾಯವಾಗಿ ಕಚೇರಿಗೆ ಬಂದೇ ಪಡೆಯಬೇಕೆಂದು ವಿದ್ಯಾರ್ಥಿಗಳು, ಹೆತ್ತವರು, ಉದ್ಯೋಗಾಕಾಂಕ್ಷಿಗಳನ್ನು ಸದಾ ಪೀಡಿಸುತ್ತಿರುವುದು ಕಂಡುಬರುತ್ತಿದೆ. ಹೀಗಾಗಿ ಹಣ ಮಾಡುವ ಉದ್ಯೋಗಕ್ಕೆ ಎಲ್ಲರೂ ಹಾತೊರೆಯುತ್ತಿರುತ್ತಾರೆ ಎನ್ನುವುದು ಎಲ್ಲರಿಗೂಗೊತ್ತಿರುವ ಸತ್ಯ.ಅದೆಲ್ಲವೂ ನಿಲ್ಲಬೇಕು.

ಆನ್‍ಲೈನ್‍ನಲ್ಲಿ ಯಾರಿಗೆಲ್ಲಾ ಸೂಕ್ತ ಮಾಹಿತಿ ಇತ್ಯಾದಿಗಳನ್ನು ತುಂಬಿ ಪಡೆದುಕೊಳ್ಳಲು ಸಾಧ್ಯವಿದೆಯೋ, ತಿಳಿದಿದ್ದಾರೋ ಅವರೆಲ್ಲಾ ಅಲ್ಲೇ ಅದನ್ನುಒಂದು/ ನಿರ್ದಿಷ್ಟ ದಿನದೊಳಗೆ ಪಡೆದುಕೊಳ್ಳುವಂತೆ ಅಧಿಕಾರಿಗಳು ಅಂತಹ ದಾಖಲೆಗಳನ್ನು ಅಪ್‍ಲೋಡ್ ಮಾಡಿ ಒದಗಿಸಿಕೊಡುವಂತಾಗಬೇಕು. ಯಾವ ಅಧಿಕಾರಿಯೂ ಕೂಡಾ 24 ಗಂಟೆಯೂ ಔಟ್‍ಡೋರ್‍ ಆಗಿಯೇ ಇರುವದಿಲ್ಲ ತಾನೇ? ಹೀಗಾಗಿ ಆನ್ ಲೈನ್‍ನಲ್ಲಿ ದಾಖಲೆಗಾಗಿ ಕೇಳಿಕೆ ಬಂದಾಗ ಅಧಿಕಾರಿಗಳು ಯಾವಾಗ ಇನ್‍ಡೋರ್‍ ಆಗುತ್ತಾರೋ ಅಥವಾ ಆನ್‍ಲೈನ್‍ನಲ್ಲಿ ಲಭ್ಯರಿರುತ್ತಾರೋ ಆಗ ಸಂಬಂಧಪಟ್ಟ ದಾಖಲೆಯ ಸತ್ಯಾಸತ್ಯತೆಯ ಪರಿಶೀಲನೆಗೈದು ಕೇಳಿದ ದಾಖಲೆಯ ಬಗೆಗೆ ವಿವರಣೆ ಅಗತ್ಯವಿದ್ದಲ್ಲಿ ಅಗತ್ಯ ವಿವರಣೆಯ ಮಾಹಿತಿ ಒದಗಿಸುವಂತೆ ಕೇಳಿ ಅಲ್ಲಿಯೇಅದರ ಪರಿಹಾರವನ್ನು ಪಡೆದು ಒಪ್ಪಿತ ದಾಖಲೆಯ ಪೂರ್ಣರೂಪವನ್ನು ಡಿಜಿಟಲ್ ಸಹಿಯ ಮೂಲಕ ಆನ್‍ಲೈನ್‍ನಲ್ಲಿಯೇ ಲಭ್ಯವಾಗಿಸಬಹುದಾಗಿದೆ. ಇಂತಹ ಕ್ರಮದಿಂದಾಗಿ ದಾಖಲೆಗಳಿಗಾಗಿ ಅನವಶ್ಯಕ ತಿರುಗಾಟ, ಅಲೆದಾಟಗಳೆಲ್ಲವೂ ನಿವಾರಣೆಯಾಗಿ ಸಂಬಂಧಿತ ದಾಖಲೆಯನ್ನು ಅಗತ್ಯ ಇರುವ ಇಲಾಖೆಗೆ ಆನ್ ಲೈನ್ ನಲ್ಲಿಯೇ ಒದಗಿಸಿಕೊಡಲೂ ಸಾಧ್ಯವಾಗುತ್ತದೆ. ಆದರೆ ಇಂತಹ ಕ್ರಮದಿಂದ ಯಾವುದೇ ನೌಕರನಿಗಾಗಲೀ, ಅಧಿಕಾರಿಗಾಗಲೀ ಹಣ ಮಾಡಲು, ಲಂಚ ಪಡೆಯಲು, ವಿಳಂಬ ಗೊಳಿಸಲು ಸಾಧ್ಯವಿಲ್ಲವಾದ್ದರಿಂದ ಇಲಾಖಾಧಿಕಾರಿಗಳು, ನೌಕರರು ಇದಕ್ಕೆ ಒಪ್ಪುತ್ತಿಲ್ಲ. ಈ ಪ್ರಕಾರ ಆನ್‍ಲೈನ್‍ನಲ್ಲಿಯೇ ದಾಖಲೆಗಳು ಸಿಗುವಂತಾದರೆ ಹಿಚ್ಚಿನ ಅಧಿಕಾರಿಗಳ ಒಳ ಒಪ್ಪಂದ, ಲಂಚದಾಟದ ಮಾಹಿತಿ, ಸುಳ್ಳು ದಾಖಲೆ ನೀಡಿರುವುದುಎಲ್ಲವೂ ಬಯಲುಗೊಂಡು ಸಾಕಷ್ಟು ಸತ್ಯತೆಗೆ, ನೈಜತೆಗೆ, ಪ್ರಾಮಾಣೀಕತೆಗೆ ಬೆಲೆ ಬರಲಿದೆ.

ವಾಸ ಸ್ಥಳದ ಪ್ರಮಾಣ ಪತ್ರಕ್ಕೆಕಂದಾಯ/ ಪೊಲೀಸ್/ ಯಾವುದೇ ಇಲಾಖೆಯ ಅಧಿಕಾರಿಯ ದಾಖಲೆಯ ಅಗತ್ಯವಾದರೂ ಏನಿದೆ? ಪಂಚಾಯತ್‍ ಅಥವಾ ವಿದ್ಯುತ್ ಇಲಾಖೆ ಅಥವಾ ಈಗಾಗಲೇ ಪಡೆದಿರುವ ಆಧಾರ್ ಪತ್ರದ ಆಧಾರದಲ್ಲಿ ಒಂದು ಅಥವಾ ಎಲ್ಲದರ ಪ್ರತಿಯನ್ನು ಇಲಾಖೆಗೆ ಆನ್‍ಲೈನ್‍ನಲ್ಲಿ ಕಳುಹಿಸಿದರೆ ಹಾಗೂ ಇನ್ನೂ ಹೆಚ್ಚಿನದಾಖಲೆ ಬೇಕಿದ್ದರೆ ಸ್ಥಳೀಯ ಆಸು ಪಾಸಿನ ಎರಡು-ಮೂರು ಮನೆಗಳವರ ಸಹಿ ಮಾಡಿದ ಮತ್ತು ಆಯಾ ಪ್ರದೇಶದ ಬಿಎಲ್ ಓ/ ಶಾಲಾ ಮುಖ್ಯಸ್ಥರು/ ಅಂಗನವಾಡಿ-ಆಶಾಕಾರ್ಯಕರ್ತರು ಮೇಲು ರುಜು ಮಾಡಿದ ದಾಖಲೆಯನ್ನು ಸಲ್ಲಿಸಿದರೂ ಅಥವಾ ಆ ದಾಖಲೆಯನ್ನು ಆನ್‍ಲೈನ್‍ನಲ್ಲಿಯೇ ಸಲ್ಲಿಸಿದರೆ ಅದರ ಆಧಾರದಲ್ಲಿಯೇ ದಾಖಲೆಯನ್ನು ಒದಗಿಸಿಕೊಡಬಹುದಾಗಿದೆ.

ದಾಖಲೆಗಳನ್ನು ಈ ಉಪಕ್ರಮದಲ್ಲಿ ಒದಗಿಸಿಕೊಡುವುದರಿಂದ ಏನು ತೊಂದರೆ ಇದೆ?ಈ ಕ್ರಮ ಬಹಳಷ್ಟು ಸುಲಭ, ಸಾಮಾಜಿಕ ಅಂತರದೊಂದಿಗೆ ಅನಗತ್ಯ ತಿರುಗಾಟ, ಇತ್ಯಾದಿ ಎಲ್ಲ ತೊಂದರೆಗಳಿಂದಲೂ ಮುಕ್ತಿ ದೊರಕಲಿದೆ. ಕೊರೊನಾದಂತಹ ಇಂತಹ ಸಂದರ್ಭಕ್ಕಂತೂ ಇದು ಬಹಳ ಉಪಯುಕ್ತ, ಶ್ರೇಷ್ಠತಮ ಮಾರ್ಗವಾಗಿದೆ. ಐಟಿ, ಬಿಟಿಯಂತಹ ಎಲ್ಲ ಸಂಸ್ಥೆಗಳೂ ಮನೆಯಿಂದಲೇ ತಮ್ಮ ಎಲ್ಲಾ ಕಾರ್ಯವನ್ನೂ ನಡೆಸುತ್ತಿರುವಾಗ ಸರಕಾರದ ಕಚೇರಿಗಳಿಗೆ, ಸಂಸ್ಥೆಗಳಿಗೆ ಏನು ತೊಂದರೆ? ರಾಜ್ಯದ ಪ್ರತಿಯೊಂದೂ ಇಲಾಖೆಯ ಮೇಲಧಿಕಾರಿಗಳು, ಸಚಿವರುಗಳು ಇಂತಹ ಯೋಗ್ಯಕ್ರಮಕ್ಕೆ ಮನಮಾಡಿದರೆ, ನೂತನ ತಾಂತ್ರಿಕತೆಯ ಸಹಾಯ, ಸಹಕಾರ ಪಡೆದು ಸಾಮಾನ್ಯರಿಗೆ ಲಾಭವನ್ನೂ ಉತ್ತೇಜಿಸಬೇಕು. ತತ್ಪರಿಣಾಮ ಲಂಚ, ರುಷುವತ್ತು, ಕೆಟ್ಟತನಗಳಿಗೆ ತಿಲಾಂಜಲಿ ನೀಡಲು ಪ್ರಯತ್ನಿಸ ಬೇಕಾಗಿದೆ.ಕೇಂದ್ರ ಸರಕಾರ ಹಲವಾರು ಅಂತಹ ಉಪಕ್ರಮಗಳನ್ನು ಕೈಗೊಂಡು ಹಣವನ್ನು ಮಧ್ಯವರ್ತಿಗಳಿಲ್ಲದೆ ನೇರವಾಗಿ ಫಲಾನುಭವಿಗಳಿಗೆ ದೊರಕಿಸಿ ಭೇಷ್ ಎನ್ನಿಸಿಕೊಂಡಿದೆ.

ಜಾತಿ/ ಆದಾಯ ಪ್ರಮಾಣ ಪತ್ರಗಳು ಕಂದಾಯ ಅಧಿಕಾರಿಗಳ ಸಹಿಯೊಂದಿಗೆ ಸಲ್ಲಿಕೆಯಾಗುತ್ತಿವೆ. ಆದರೆ ಎಷ್ಟು ಸತ್ಯವಾಗಿವೆ? ಏಕೆಂದರೆಎರಡು- ಮೂರುಅಂಗಡಿ ಮುಂಗಟ್ಟು, ಕಟ್ಟಡ, ವಾಹನ, ಬಂಗಲೆಯಂತಹ ಮನೆ ಇತ್ಯಾದಿ ಇರುವ ವ್ಯಕ್ತಿಯೂ ಕೂಡಾ ಕೇವಲ 40/ 50 ಸಾವಿರದ ವಾರ್ಷಿಕ ಆದಾಯವನ್ನು ತೋರಿಸುತ್ತಾನೆ. ಆದರೆ ಸ್ವತ: ಆತನ ಬದಿಯ ಮನೆಗಳವರೇ ಆತನ ಪ್ರತಿ ತಿಂಗಳ ಲಕ್ಷಗಟ್ಟಲೆ ಆದಾಯವನ್ನು, ಆತನ ಮನೆಯಲ್ಲಿರುವ ಐಷಾರಾಮಿ ವಸ್ತುಗಳನ್ನು ನೋಡಿ ಬೆಚ್ಚಿ ಬಿದ್ದಿರುತ್ತಾರೆ.ಕೆಲವು ವ್ಯಾಪಾರಸ್ಥರು, ಲಾಯರರುಗಳು, ಡಾಕ್ಟರರುಗಳು, ನೌಕರರು, ಅಧಿಕಾರಿಗಳು ತಮ್ಮ ಮನೆಯಲ್ಲಿ ಲಕ್ಷಗಟ್ಟಲೆ ಕ್ರಯದ ಸ್ಮಾರ್ಟಟೀವಿ/ ಎರಡು ಮೂರುಟೀವಿ, ಐಷಾರಾಮೀ ಸೌಲಭ್ಯಗಳು, ಲಕ್ಷಗಟ್ಟಲೆಕ್ರಯದ ಕಾರುಗಳು, ಇತ್ಯಾದಿ ಇರುತ್ತವೆ. ಆದರೆಅವರುತಮ್ಮಜಾತಿ/ ಆದಾಯ ಪ್ರಮಾಣ ಪತ್ರಗಳಲ್ಲಿ ಸುಳ್ಳು ಮಾಹಿತಿಯನ್ನು ಒದಗಿಸಿ ಲಂಚ ನೀಡಿ, ಪ್ರಮಾಣ ಪತ್ರವನ್ನು ಹೊಂದಿರುತ್ತಾರೆ.ಅಂತಹ ಎಲ್ಲಾ ಪ್ರಮಾಣ ಪತ್ರಗಳೂ ಆನ್‍ಲೈನ್‍ನಲ್ಲಿ ಒದಗಿಸಬೇಕಾದಾಗ ಸುಳ್ಳು ಎನ್ನುವುದು ತಿಳಿದು ಬರುತ್ತದೆ, ಸಾಬೀತಾಗುತ್ತದೆ.

ಸ್ಥಳೀಯ ಎರಡು- ಮೂರು ಮನೆಗಳವರು ದಾಖಲೆ ಒದಗಿಸುವಾಗ ಮತ್ತು ಬಿಎಲ್ ಓ/ಶಾಲಾ ಮುಖ್ಯಸ್ಥರು/ ಅಂಗನವಾಡಿ-ಆಶಾಕಾರ್ಯಕರ್ತರು ಮೇಲು ರುಜು ಮಾಡುವಾಗ ಲಭ್ಯವಿರುವ ಎಲ್ಲವನ್ನೂ ದಾಖಲಿಸುವುದರಿಂದ ಅನಿವಾರ್ಯವಾಗಿ ಸತ್ಯವೆಲ್ಲವೂ ಹೊರಬಿದ್ದು ಸುಳ್ಳು ದಾಖಲೆ ಪಡೆಯಲೂ ಅಸಾಧ್ಯವಾಗುತ್ತದೆ.ಲಂಚ, ರುಷುವತ್ತು, ಕೆಟ್ಟ ಸಂಪ್ರದಾಯ, ಸುಮ್ಮಗೇತಿರುಗಾಟ ಇತ್ಯಾದಿಗಳೆಲ್ಲವೂ ಇಂತಹದರಿಂದತಹಬಂದಿಗೆ ಬಂದುಯೋಗ್ಯ, ಉತ್ತಮ, ಪ್ರಾಮಾಣಿಕತೆಗಳು ಬೆಳೆಯಲು, ಬೆಳಗಲು ಸಾಧ್ಯವಿದೆ. ಭಾರತ ದೇಶದ ಒಳಿತಿಗಾಗಿ ಎಲ್ಲ ಇಲಾಖೆಗಳ ಎಲ್ಲರೂ,  ಸಚಿವರೂ ಈ ಕಾರ್ಯಕ್ಕೆ ಕೈಜೋಡಿಸಿದರೆ ಮಾತ್ರ ಗಾಂಧೀಜಿಯ ರಾಮರಾಜ್ಯ ನಿರ್ಮಾಣವಾಗಬಹುದು.


ಲೇಖನ: ರಾಯೀರಾಜಕುಮಾರ್, 

ಮೂಡುಬಿದಿರೆ–ರಾಜ್ಯಸಂಪನ್ಮೂಲ ವ್ಯಕ್ತಿ, ಸಮಾಜಚಿಂತಕರು, ಲೇಖಕರು.