ಇದೊಂದು ಪೌರಾಣಿಕ ಪ್ರಸಂಗವನ್ನು ನೆನಪಿಗೆ ತರುವ ಗಾದೆ. ಇದರಲ್ಲಿ ಅಡಗಿರುವ ತತ್ವ ಮನುಷ್ಯರಿಗೆ ಒಳ್ಳೆಯ ಪಾಠ ಕಲಿಸುತ್ತದೆ. ಹೆಣ್ಣು ಮತ್ತು ಮಣ್ಣಿನ ವ್ಯಾಮೋಹಕ್ಕೆ ಒಳಗಾಗುವ ಶ್ರೀಮಂತ ವ್ಯಕ್ತಿಯಾಗಲಿ, ಬಡವನೇ ಆಗಲಿ ಆತ ಮತಿಹೀನನಾಗುತ್ತಾನೆ ಎಂಬುದೇ ಗಾದೆಯ ಸಾರಾಂಶ.
ಲಂಕೆಗೆ ಅಧಿಪತಿಯಾದ ರಾವಣ ಸರ್ವಶಕ್ತ. ಶಿವನ ಭಕ್ತಿಯಲ್ಲಿ ಶಿವನನ್ನೇ ಸೋಲಿಸಿದಾತ. ಆದರೆ ಶ್ರೀರಾಮನ ಪತ್ನಿ ಸೀತೆಯ ಮೇಲೆ ಮೋಹಗೊಂಡ. ಆತನ ಈ ಅವಿವೇಕಿತನ ಸೀತೆಯನ್ನು ಲಂಕೆಗೆ ಅಪಹರಿಸಿಕೊಂಡು ಹೋಗುವಂತೆ ಮಾಡಿತು. ನಂತರ ರಾಮ ಮತ್ತು ಕಪಿಸೇನೆ ರಾವಣನ ಸೈನ್ಯವನ್ನು ಸದೆಬಡಿಯಿತು. ವೇದಜ್ಞಾನ, ಐಶ್ವರ್ಯ, ಸೈನ್ಯ, ಕುಟುಂಬ ಎಲ್ಲಾ ಇದ್ದರೂ ಅದರ ಬೆಲೆ ಅರಿಯದೆ ಹೆಣ್ಣಿಗಾಗಿ ಆಸೆಪಟ್ಟು ತನ್ನವರನ್ನೆಲ್ಲ ಕಳೆದುಕೊಂಡು, ಕೊನೆಗೆ ತಾನೂ ಸತ್ತವನು ರಾವಣ.
ದುರ್ಯೋಧನನಿಗೆ ಭೂಮಿಯ ಮೋಹ ವಿಪರೀತ. ತನ್ನಲ್ಲಿದ್ದ ಭೂಮಿ ಆತನಿಗೆ ಸಾಕಾಗಲಿಲ್ಲ. ಪಾಂಡವರನ್ನು ಪಗಡೆಯಾಟದಲ್ಲಿ ಮೋಸದಿಂದ ಸೋಲಿಸಿದ. ಕೊನೆಗೆ ಅವರೊಂದಿಗೆ ಯುದ್ಧಕ್ಕೆ ಇಳಿದ. ಶ್ರೀಕೃಷ್ಣ ಯುದ್ಧವನ್ನು ತಡೆಯಲು ಬಂದರೂ ಒಪ್ಪಿಕೊಳ್ಳಲಾಗದಷ್ಟು ಮೂಢನಾದ. ಕೊನೆಗೆ ಅವನೇ ಕೌರವರ ನಾಶಕ್ಕೆ ಕಾರಣನಾದ. ತನ್ನ ರಾಜ್ಯ, ಸೈನ್ಯ, ಪ್ರೀತಿಯ ಸಹೋದರರನ್ನು ಕಳೆದುಕೊಂಡು ಅನಾಥನಂತೆ ಶವವಾದ.
ರಾವಣ - ದುರ್ಯೋಧನರಂತಹ ಮನಸ್ಥಿತಿ ಈಗಲೂ ಹಲವರಲ್ಲಿದೆ. ಹೆಣ್ಣು, ಹೊನ್ನು, ಮಣ್ಣಿನ ಬಗ್ಗೆ ಅತಿಯಾದ ವ್ಯಾಮೋಹ ಹೊಂದಿದವರು ಮತ್ತು ಅದರ ಸಂಪಾದನೆಗಾಗಿ ಅನ್ಯಾಯದ ಹಾದಿಯನ್ನು ತುಳಿಯುತ್ತಿದ್ದಾರೆ. ತಾಳಿ ಕಟ್ಟಿದ ಹೆಂಡತಿಗೆ ಮೋಸಮಾಡುತ್ತಿದ್ದಾರೆ. ಕೊಲೆ, ದರೋಡೆ–ಸುಲಿಗೆಯಲ್ಲಿ ತೊಡಗಿದ್ದಾರೆ. ಕೊನೆಗೊಂದು ದಿನ ಮಾಡಿದ ಪಾಪಕ್ಕೆ ಪ್ರಾಯಶ್ಚಿತ ಪಡುತ್ತಾರೆ.
ದುರಾಸೆ ಇರಬಾರದು. ಅನ್ಯಾಯದ ಮಾರ್ಗದಲ್ಲಿ ಹೋಗಬಾರದು. ಧರ್ಮದ ಹಾದಿಯಲ್ಲಿ ನಡೆಯಬೇಕು. ಅಧರ್ಮಿಯಾದರೆ ರಾವಣ, ದುರ್ಯೋದನರ ಹಾಗೆ ನಾಶಕ್ಕೆ ಗುರಿಯಾಗಬೇಕಾಗುತ್ತದೆ. ಹೆಣ್ಣು, ಹೊನ್ನು, ಮಣ್ಣು ನಮಗೆ ತಾನಾಗೇ ಒಲಿದು ಬರಬೇಕು. ಅಲ್ಲಿವರೆಗೆ ತಾಳ್ಮೆಯಿಂದ ಕಾಯಬೇಕಾಗುತ್ತದೆ. ಬದಲಾಗಿ ನಾವೇ ಅವುಗಳ ಹಿಂದೆ ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ.
ದೀಕ್ಷಿತಾ
ದ್ವಿತೀಯ ಬಿಎ
ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು