ಮಂಗಳೂರು: ಕೊರೊನಾವೈರಸ್ ಸಾಂಕ್ರಾಮಿಕ ರೋಗ ಹರಡದಂತೆ ಲಾಕ್ಡೌನ್ ವಿಧಿಸಿದ್ದರಿಂದ ದೇಶಿ, ವಿದೇಶಿ ವಿಮಾನಯಾನ ಸ್ಥಗಿತಗೊಂಡಿತ್ತು. ಸೆಪ್ಟೆಂಬರ್ 22ರಿಂದ ಮಂಗಳೂರಿನಿಂದ ನವದೆಹಲಿ ಮತ್ತೆ ವಿಮಾನಯಾನ ಆರಂಭಿಸಿರುವುದಾಗಿ ಸ್ಪೈಸ್ ಜೆಟ್ ವಿಮಾನ ಸಂಸ್ಥೆ ಪ್ರಕಟಿಸಿದೆ. ಜೊತೆಗೆ ಸೆಪ್ಟೆಂಬರ್ 23ರಿಂದ ಬೆಂಗಳೂರು ನಡುವೆ ವಿಮಾನಯಾನ ಆರಂಭವಾಗಿದೆ.

ಸ್ಪೈಸ್ ಜೆಟ್ ಪ್ರಕಟಣೆ ಪ್ರಕಾರ, ನವದೆಹಲಿಯಿಂದ 10.10ಕ್ಕೆ ಹೊರಟು ಮಂಗಳವಾರ ಮಧ್ಯಾಹ್ನ 12.35ಕ್ಕೆ ವಿಮಾನ ಬಜ್ಪೆ ನಿಲ್ದಾಣಕ್ಕೆ ಬಂದಿಳಿದಿದೆ. ನಂತರ ಮಧ್ಯಾಹ್ನ 1.30 ಗಂಟೆಗೆ ಹೊರಟು ದೆಹಲಿಯನ್ನು 3.55ಕ್ಕೆ ತಲುಪಲಿದೆ. ಸದ್ಯಕ್ಕೆ ಮಂಗಳವಾರ ಹಾಗೂ ಭಾನುವಾರದಂದು ಮಾತ್ರ ವಿಮಾನಯಾನ ಸೇವೆ ಲಭ್ಯವಾಗಲಿದೆ.

ಇದಲ್ಲದೆ ಮಂಗಳೂರು-ಬೆಂಗಳೂರು ನಡುವೆ ಬುಧವಾರ (ಸೆಪ್ಟೆಂಬರ್ 23)ದಿಂದ ಮತ್ತೆ ವಿಮಾನಯಾನ ಆರಂಭವಾಗಿದೆ. ಎರಡು ನಗರಗಳ ನಡುವೆ ಪ್ರತಿ ಬುಧವಾರ ಹಾಗೂ ಗುರುವಾರದಂದು ವಿಮಾನಯಾನ ಸಾಧ್ಯವಿದೆ ಎಂದು ಸಂಸ್ಥೆ ಹೇಳಿದೆ.ಬೆಂಗಳೂರಿನ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗ್ಗೆ 9.45ಕ್ಕೆ ಹೊರಟು ಮಂಗಳೂರನ್ನು 10.30ಕ್ಕೆ ತಲುಪಲಿದೆ. ಮಂಗಳೂರಿನಿಂದ 11ಕ್ಕೆ ಹೊರಟು ಬೆಂಗಳೂರನ್ನು 11.55ಕ್ಕೆ ತಲುಪಲಿದೆ ಎಂದು ಸ್ಪೈಸ್ ಜೆಟ್ ಹೇಳಿದೆ.